ಕುಶಾಲನಗರ, ಅ. ೭: ಹಿರಿಯ ನಾಗರಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಸಲಹೆಗಾರರು ಮತ್ತು ಸ್ಥಾಪಕ ಸದಸ್ಯರಾದ ನಿವೃತ್ತ ಮುಖ್ಯ ಶಿಕ್ಷಕ ಎಂ.ಹೆಚ್. ನಜೀರ್ ಅಹ್ಮದ್ ಕರೆ ನೀಡಿದರು.

ಕುಶಾಲನಗರ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಕುಶಾಲನಗರ ತಾಲೂಕಿನ ಸದಸ್ಯರ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಮಡಿಕೇರಿಯ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಬಿ. ಮಾದಮ್ಮಯ್ಯ ಅವರು ಮಾತನಾಡಿ, ನಿವೃತ್ತ ನೌಕರರ ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿದರು. ಸಾಮಾಜಿಕ ಜಾಲತಾಣಗಳ ಕೆಲವು ಅಪರಾಧಿಗಳು ಹಿರಿಯ ನಾಗರಿಕರನ್ನು ವಂಚಿಸಲು ಹಲವು ರೀತಿಯಲ್ಲಿ ಹವಣಿಸುತ್ತಿದ್ದಾರೆ ಎಂದು ಸುಳಿವು ನೀಡಿದ ಅವರು ಜೀವನ ಪ್ರಮಾಣ ಪತ್ರ ನವೀಕರಣ ಹೆಸರಿನಲ್ಲಿ ನಿವೃತ್ತ ನೌಕರರ ಓಟಿಪಿ ಮಾಹಿತಿ ಪಡೆಯುತ್ತಿದ್ದು ಇದರಿಂದ ಹಲವರು ವಂಚನೆಗೆ ಒಳಗಾಗಿದ್ದಾರೆ. ಈ ಬಗ್ಗೆ ಪ್ರತಿಯೊಬ್ಬ ನಿವೃತ್ತ ನೌಕರರು ಎಚ್ಚರ ವಹಿಸಬೇಕು ಎಂದರು. ಸಂಘದ ಕುಶಾಲನಗರ ತಾಲೂಕು ಅಧ್ಯಕ್ಷ ಸಿ.ಸಿ. ರಾಘವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ೨೦ ಮಂದಿ ನಿವೃತ್ತ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು. ಆಡಳಿತ ಮಂಡಳಿ ಕಾರ್ಯದರ್ಶಿ ಎಂ. ಅಬ್ರಹಾಂ ದಿವಾಕರ್ ವರದಿ ವಾಚಿಸಿದರು. ಖಜಾಂಚಿ ಕೆ.ಎ. ನಾಣಯ್ಯ ಲೆಕ್ಕಪತ್ರ ಮಂಡಿಸಿದರು.

ಸAಘದ ಉಪಾಧ್ಯಕ್ಷ ಎಂ.ಬಿ. ಮೊಣ್ಣಪ್ಪ, ಹಿರಿಯ ಸದಸ್ಯ ಬಾಚರಣಿಯಂಡ ಅಪ್ಪಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು ಪಾಲ್ಗೊಂಡಿದ್ದರು.