ಪೊನ್ನಂಪೇಟೆ, ಅ. ೮: ವಿಶ್ವಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯ ಅಂಗವಾಗಿ ವೀರಾಜಪೇಟೆ ಸಮೀಪದ ನಲ್ವತ್ತೊಕ್ಲಿನ ಮೊಹಿದ್ದೀನ್ ಜುಮಾ ಮಸೀದಿ ಮತ್ತು ಅಲ್ಲಿನ ಬುಸ್ತಾನುಲ್ ಉಲೂಂ ಮದರಸ ವತಿಯಿಂದ ಈದ್ ಮಿಲಾದ್ ಅನ್ನು ಅದ್ಧೂರಿ ಯಿಂದ ಆಚರಿಸಲಾಯಿತು.

ಮಸೀದಿ ಆವರಣದಲ್ಲಿ ಧ್ವಜಾ ರೋಹಣ ನೆರವೇರಿಸಿ ಮಾತನಾಡಿದ ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿಯ ಅಧ್ಯಕ್ಷರಾದ ದುದ್ಧಿಯಂಡ ಹೆಚ್. ಸೂಫಿ ಹಾಜಿ, ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಪುಣ್ಯ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಆದರ್ಶಗಳ ಕುರಿತು ವ್ಯಾಪಕ ಬೋಧನೆಯಾಗಬೇಕಾಗಿರುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ಜನರಿಗೆ ಧಾರ್ಮಿಕವಾಗಿರುವ ಕೆಲವು ಕೆಟ್ಟ ನಂಬಿಕೆಗಳು ದೂರವಾದರೆ ಮಾತ್ರ ಅವರು ಮಾನವ ಸಹೋದರತೆಯ ಕುರಿತು ಚಿಂತಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಧ್ವಜಾರೋಹಣದ ನಂತರ ಮದರಸಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಮುಖ್ಯರಸ್ತೆಯಲ್ಲಿ ಪ್ರವಾದಿಯವರ ಸಂದೇಶ ಜಾಥ ನಡೆಸಿದರು. ಪ್ರವಾದಿ ಸಂದೇಶ ಜಾಥ ಮರಳಿ ಬಂದು ಮಸೀದಿ ಆವರಣ ದಲ್ಲಿ ಸಮಾಪನೆಗೊಂಡಿತು. ಬಳಿಕ ಈದ್ ಮಿಲಾದ್ ಅಂಗವಾಗಿ ಸ್ಥಳೀಯ ಬುಸ್ತಾನುಲ್ ಉಲೂಂ ಮದರಸ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರಾದ ಸಯ್ಯದ್ ಮಹದಿ ತಂಗಳ್, ನಲ್ವತ್ತೋಕ್ಲು ಮೊಹಿದ್ದೀನ್ ಜುಮಾ ಮಸೀದಿಯ ಖತೀಬರಾದ ಮುಬಶೀರ್ ಅಹ್ಸನಿ, ಸದರ್ ಉಸ್ತಾದ್ ಸಫ್ವಾನ್ ಸಖಾಫಿ, ಮದರಸ ಅಧ್ಯಾಪಕರಾದ ಹಂಸ ಮುಸ್ಲಿಯಾರ್, ಸೌಕತ್ ಮುಸ್ಲಿಯಾರ್, ಸಾಹಿರ್ ಮುಸ್ಲಿಯಾರ್, ನಲ್ವತ್ತೋಕ್ಲು ಮೊಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಡಿ.ಎಫ್. ಅಶ್ರಫ್, ಕಾರ್ಯದರ್ಶಿ ಡಿ.ಎಂ. ಯೂಸುಫ್, ಜಂಟಿ ಕಾರ್ಯದರ್ಶಿ ಪಿ.ಎ. ಬಶೀರ್, ಪದಾಧಿಕಾರಿಗಳಾದ ಕೆ.ಎಂ.ಹ್ಯಾರಿಸ್, ಡಿ.ಎಂ. ಸಿರಾಜ್, ಶಫೀಕ್, ಡಿ.ಎಚ್. ಸಮದ್, ಹಾಶಿಮ್, ಪಿ.ಎ. ಮಜೀದ್ ಶಹಬಾನ್ ಸೇರಿದಂತೆ ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮದರಸಾ ವಿದ್ಯಾರ್ಥಿ ಗಳಿಗೆ ಇದೇ ಸಂದರ್ಭದಲ್ಲಿ ಬಹು ಮಾನ ವಿತರಿಸಲಾಯಿತು. ಮುಬಶೀರ್ ಅಹ್ಸನಿ ಅವರು ವಿಶೇಷ ಪ್ರಾರ್ಥನೆಗೆ ನೇತೃತ್ವ ನೀಡಿದರು. ಪಿ.ಎ. ಮಜೀದ್ ಸ್ವಾಗತಿಸಿದರು. ಬಶೀರ್ ವಂದಿಸಿದರು. ಸಾಮೂಹಿಕ ಅನ್ನ ಸಂತರ್ಪಣೆ ಜರುಗಿತು.