ಮಡಿಕೇರಿ, ಅ. ೭: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಾ.೯ ರಿಂದ ೧೪ ರವರೆಗೆ ಮೂರನೇ ಸುತ್ತಿನ ಪರಿಣಾಮಕಾರಿ ಮಿಷನ್ ಇಂದ್ರದನುಷ್ ೫.೦ ಲಸಿಕಾ ಕಾರ್ಯಕ್ರಮ ನಡೆಯಲಿದೆ.

ಇದರ ಪ್ರಯುಕ್ತ ಲಸಿಕೆಗೆ ಅರ್ಹ ಗರ್ಭಿಣಿಯರಿಗೆ, ೨ ವರ್ಷದೊಳಗಿನ ಅರ್ಹ ಮಕ್ಕಳಿಗೆ ಹಾಗೂ ಲಸಿಕೆ ವಂಚಿತ ಗರ್ಭಿಣಿಯರು ಮತ್ತು ಲಸಿಕೆ ವಂಚಿತ ೨-೫ ವರ್ಷದೊಳಗಿನ ಮಕ್ಕಳಿಗೆ ಎಲ್ಲಾ ಅಂಗನವಾಡಿಗಳು, ಉಪ ಕೇಂದ್ರಗಳು, ಪ್ರಾ.ಆ.ಕೇಂದ್ರಗಳಲ್ಲಿ ಹಾಗೂ ಸಮುದಾಯ ಮಟ್ಟದಲ್ಲಿ ಲಸಿಕಾ ಶಿಬಿರ ಆಯೋಜಿಸಿ ಅರ್ಹ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ.

ಕ್ಷೇತ್ರ ಮಟ್ಟದ ಲಸಿಕಾ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು ಭಾಗವಹಿಸುವರು. ನಾಯಿಕೆಮ್ಮು, ದಡಾರ-ರುಬೆಲ್ಲಾ, ಪೋಲಿಯೋ, ಗಂಟಲು ಮಾರಿ, ನ್ಯುಮೋನಿಯಾ, ಅತಿಸಾರ ಭೇದಿ, ಹೈಪಟೈಟಿಸ್-ಬಿ, ಧನುರ್ವಾಯು ಮತ್ತು ಕ್ಷಯರೋಗಗಳನ್ನು ಲಸಿಕೆಯಿಂದ ಮಾತ್ರವೇ ತಡೆಯಬಹುದಾಗಿದ್ದು, ಈ ಕಾರಣಕ್ಕಾಗಿ ಈ ಅಭಿಯಾನ ನಡೆಸಲಾಗುತ್ತಿದೆ.

ಇದರ ಬಗ್ಗೆ ಪಟ್ಟಣ ಪಂಚಾಯತ್/ ಪುರಸಭೆ/ ಗ್ರಾಮ ಪಂಚಾಯತ್‌ಗಳಲ್ಲಿನ ತ್ಯಾಜ್ಯ ಸಂಗ್ರಹಣಾ ವಾಹನಗಳ ಧ್ವನಿವರ್ಧಕಗಳಲ್ಲಿ ರೇಡಿಯೋ ಜಿಂಗಲ್ಸ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ಕೋರಿದ್ದಾರೆ.