ಮಡಿಕೇರಿ, ಅ. ೮: ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಕಳೆದ ತಿಂಗಳು ಬಸ್ ಅವಘಡದಿಂದ ಹಾನಿಗೊಳಗಾಗಿದ್ದ ಪದ್ಮಭೂಷಣ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಮರುಸ್ಥಾಪಿಸುವ ಕಾಮಗಾರಿಕೆ ಪ್ರಾಥಮಿಕ ಹಂತದ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಬಸ್ ಅವಘಡದಿಂದಾಗಿ ಪ್ರತಿಮೆ ಹಾಗೂ ಇದರ ಸ್ತಂಭ ಹಾನಿಗೀಡಾಗಿತ್ತು. ಬಳಿಕ ಪ್ರತಿಮೆಯನ್ನು ಸರಿಪಡಿಸಲು ಮೈಸೂರಿನ ಶಿಲ್ಪಕಲಾ ಅಕಾಡೆಮಿಗೆ ರವಾನಿಸಲಾಗಿದ್ದು, ಅಲ್ಲಿನ ಶಿಲ್ಪಿ ಇದನ್ನು ಸರಿಪಡಿಸುತ್ತಿದ್ದಾರೆ. ಇದೀಗ ಮಡಿಕೇರಿ ನಗರಸಭೆಯ ವತಿಯಿಂದ ಈ ಹಿಂದೆ ಪ್ರತಿಮೆ ಇದ್ದ ಸ್ಥಳದಲ್ಲೇ ಈ ಪ್ರತಿಮೆಯನ್ನು ವ್ಯವಸ್ಥಿತ ರೀತಿಯಲ್ಲಿ ಮರು ಸ್ಥಾಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಶಾಸಕರು ಸೇರಿದಂತೆ ಪ್ರಮುಖರ ಸಭೆಯಲ್ಲೂ ನಿರ್ಧರಿಸಲಾಗಿತ್ತು.

ಇದೀಗ ಇದರ ಪ್ರಾಥಮಿಕ ಹಂತಹ ಕೆಲಸ ಆರಂಭಿಸಲಾಗಿದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಪ್ರತಿಮೆ ಸ್ಥಾಪನೆಯಾಗಲಿದೆ ಎಂದು ಹೇಳಲಾಗಿದೆ.