ಚAದ್ರಮೋಹನ್ ಎಂ.ಎನ್.
ಕುಶಾಲನಗರ, ಅ. ೭ : ಕೊಡಗು ಜಿಲ್ಲೆಯ ಗಡಿ ಸುತ್ತ ಆವರಿಸಿರುವ ದಟ್ಟ ಕಾಡು, ಅದನ್ನು ಮೀರಿಸಿದ ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರಾಕೃತಿಕ ಸಂಪತ್ತು ನಡುವೆ ಕಳೆದ ಕೆಲವು ವರ್ಷಗಳಿಂದ ಆನೆ- ಮಾನವ ಸಂಘರ್ಷ ತಾರಕಕ್ಕೆ ಏರಿದೆ.
ಸಮೃದ್ಧ ವನದಲ್ಲಿ ನೆಮ್ಮದಿ ಬದುಕು ನಡೆಸುತ್ತಿದ್ದ ಕಾಡುಪ್ರಾಣಿಗಳ ಜೀವನ ಚಕ್ರ ಅಸ್ತವ್ಯಸ್ತಗೊಂಡು ನಾಗಾಲೋಟದ ಅಭಿವೃದ್ಧಿ, ಅವೈಜ್ಞಾನಿಕ ರೀತಿಯ ಪ್ರವಾಸೋದ್ಯಮ ಬೆಳವಣಿಗೆ, ನಗರೀಕರಣ, ಕಾಡಿನಂಚಿನಲ್ಲಿ ಕಲ್ಲು ಗಣಿಗಾರಿಕೆ ಮತ್ತಿತರ ಚಟುವಟಿಕೆಗಳಿಂದ ಕಾಡಾನೆಗಳು ಕಾಡಿನಿಂದ ನಾಡಿಗೆ ಲಗ್ಗೆ ಹಾಕುವ ಪರಿಸ್ಥಿತಿ ಸೃಷ್ಟಿಯಾಗಿದೆ.
ಕಾಡಿನೊಳಗೆ ಮಾನವ ಹಸ್ತಕ್ಷೇಪದಿಂದ ಕಂಗೆಟ್ಟ ಪ್ರಾಣಿಗಳು ಆಗಾಗ ಆಹಾರಕ್ಕಾಗಿ ನಾಡಿಗೆ ದಾಳಿ ಇಡುತ್ತಿವೆ. ಆನೆಯಂತಹ ಪ್ರಾಣಿಗಳು ಕಾಡಂಚಿನ ಗ್ರಾಮಗಳ ರೈತರ ಬೆಳೆದ ಬೆಳೆಗೆ ಬಾಯಿ ಹಾಕುತ್ತಿವೆ. ನೊಂದ ಬೆಳೆಗಾರರು ಆನೆಯ ಮೇಲೆ ದ್ವೇಷ ಸಾಧಿಸುವಂತಾಗಿದೆ. ಇದು ಜಿಲ್ಲೆಯ ನಿರಂತರ ಪ್ರಕ್ರಿಯೆಯಾಗಿದೆ.
ತಾವು ಓಡಾಡುವ ರಸ್ತೆಯನ್ನು, ಓಣಿಯನ್ನು ಯಾರಾದರೂ ಒತ್ತುವರಿ ಮಾಡಿದಲ್ಲಿ ಠಾಣೆ, ಕೋರ್ಟ್ ಮೆಟ್ಟಿಲು ಹತ್ತುವ ಮಾನವರು, ಕಾಲಾಂತರದಿAದ ಆನೆಗಳು ಸಾಗುವ ಮಾರ್ಗ ಕಾರಿಡಾರ್ ಹಾಗೂ ಅವುಗಳ ಜೊತೆ ವಾಸಸ್ಥಾನವಾದ ಕಾಡನ್ನೇ ಅತಿಕ್ರಮಿಸಿಕೊಂಡು ನೆಮ್ಮದಿ ಸಹನೆ ಕಳೆದುಕೊಂಡು ದಿನದೂಡುವ ಪರಿಸ್ಥಿತಿ ಮೂಕ ಪ್ರಾಣಿಗಳಿಗೆ ಎದುರಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಕಾಡಾನೆಗಳು ಆಹಾರ ಅರಸುತ್ತ ನಾಡಿನೊಳಗೆ ನುಗ್ಗುತ್ತಿರುವುದು ರೈತನ ಬೆವರಿನ ದುಡಿಮೆಯನ್ನು ತಿಂದು ತೇಗುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಈ ಅಮಾಯಕ ಮುಗ್ಧ ಜೀವಿಗಳಿಗೆ ಕೆಲವೊಮ್ಮೆ ಸಾವಿನ ಶಿಕ್ಷೆ ಕೂಡ ನೀಡುತ್ತಿರುವುದು ಇತ್ತೀಚಿನ ಬೆಳವಣಿಗೆ ಯಾಗಿದೆ. ಇದೊಂದು ರೀತಿಯಲ್ಲಿ ‘ಆನೆ ಬೇನೆ’ ಎಂದರೆ ತಪ್ಪಾಗಲಾರದು.
ಕುಶಾಲನಗರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಪ್ರಸಕ್ತ ೫೦ ರಿಂದ ೬೦ ಕಾಡಾನೆಗಳು ನೆಲೆ ಕಂಡಿದ್ದು ಬಹುತೇಕ ಅತಂತ್ರ ಸ್ಥಿತಿಯಲ್ಲಿವೆ. ಈ ಆನೆಗಳ ಬೇನೆಯನ್ನು ಯಾರು ಕೂಡ ಊಹಿಸುತ್ತಿಲ್ಲ.
ನಾಡಿನಲ್ಲಿ ಜನರ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಕಾಡಿನಲ್ಲಿ ಪ್ರಾಣಿಗಳ ಸಂತತಿ ಕೂಡ ಏರಿಕೆಯಾಗುತ್ತಿದೆ.
(ಮೊದಲ ಪುಟದಿಂದ) ಅರಣ್ಯಗಳಲ್ಲಿ ವನ್ಯಜೀವಿಗಳಿಗೋಸ್ಕರ ಯಾವುದೇ ಶಾಶ್ವತ ಯೋಜನೆ ರೂಪುಗೊಳ್ಳುತ್ತಿಲ್ಲ. ಕಾಡಿನ ಬಗ್ಗೆ, ಅಲ್ಲಿ ಜೀವಿಸುವ ವನ್ಯಜೀವಿಗಳ ಬಗ್ಗೆ ಯಾರೂ ತಲೆಕೆಡಿಸಿ ಕೊಂಡAತಿಲ್ಲ ಎಂದರೆ ತಪ್ಪಾಗಲಾರದು. ಅರಣ್ಯದ ಒಳಗಡೆ ಅಥವಾ ಪಕ್ಕದಲ್ಲಿ ನಡೆಯುವ ಕಲ್ಲು ಗಣಿಗಾರಿಕೆ ಹಾಗೂ ಬಳಸುವ ಸ್ಪೋಟಕಗಳ ಸದ್ದಿನಿಂದಾಗಿ ವನ್ಯಜೀವಿಗಳ ನೆಮ್ಮದಿಗೆ ಪೆಟ್ಟು ಬಿದ್ದಿದೆ. ದಿನೇ ದಿನೇ ಅರಣ್ಯದಂಚಿನ ಒತ್ತುವರಿ ಕೂಡ ಪ್ರಾಣಿಗಳ ಸಹನೆಯನ್ನು ಪರಿಶೀಲನೆಗೆ ಒಳಪಡಿಸುತ್ತಿವೆ.
ಜಮೀನಿನ ಸುತ್ತ ಅಳವಡಿಸುತ್ತಿರುವ ವಿದ್ಯುತ್ ಬೇಲಿ ಸ್ಪರ್ಶಿಸಿ ಕೆಲವು ಆನೆಗಳು ಸಾವು ಕಂಡರೆ ಇನ್ನು ಕೆಲವು ಅರಣ್ಯದ ಅಂಚಿನಲ್ಲಿ ತಳ ಭಾಗದಲ್ಲಿ ಅಳವಡಿಸಿರುವ ವಿದ್ಯುತ್ ತಂತಿಗಳು ತಗಲಿ ಸಾವನ್ನಪ್ಪಿರುವ ಹಲವು ಪ್ರಕರಣಗಳು ಅಲ್ಲಲ್ಲಿ ಘಟಿಸಿವೆ.
ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಮೀಸಲು ಅರಣ್ಯದಲ್ಲಿ ಇತ್ತೀಚಿನ ವರ್ಷದಲ್ಲಿ ೧೪ ಕಾಡಾನೆಗಳು ಸ್ವಾಭಾವಿಕವಾಗಿ ಮರಣಪಟ್ಟಿವೆ ಎಂದು ಅರಣ್ಯ ಇಲಾಖಾ ದಾಖಲೆಗಳು ತಿಳಿಸಿದ್ದರೆ, ೫ ಕಾಡಾನೆಗಳು ವಿದ್ಯುತ್ ಸ್ಪರ್ಶದಿಂದ ಅಸುನೀಗಿವೆ. ತಾಲೂಕಿನ ರಸಲ್ಪುರ ಗ್ರಾಮದ ಕೆ.ಯು. ಜಗದೀಶ್ ಎಂಬವರ ತೋಟದಲ್ಲಿ ಇತ್ತೀಚೆಗಷ್ಟೇ ಹೆಣ್ಣು ಆನೆ ಒಂದನ್ನು ಗುಂಡು ಹೊಡೆದು ಸಾಯಿಸಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇಂತಹ ಪ್ರಕರಣಗಳು ಜಿಲ್ಲೆಯ ಕೆಲವೆಡೆ ನಡೆಯುತ್ತಿರುವುದು ಕೂಡ ಕಾಣಬಹುದು.
ಆನೆಗಳು ಸಸ್ಯಹಾರಿ ಪ್ರಾಣಿಗಳಾಗಿದ್ದು ದಿನಕ್ಕೆ ೫೦ ರಿಂದ ೬೦ ಕಿಲೋಮೀಟರ್ ನಡೆದಾಡುತ್ತವೆ ಎಂದು ತಿಳಿಸಿರುವ ವನ್ಯಜೀವಿ ತಜ್ಞ ಡಾ.ಚಿಟ್ಟಿಯಪ್ಪ, ಆನೆಗಳಿಗೆ ಅಂದಾಜು ೩೦೦ ಲೀಟರ್ ನೀರಿನ ಅವಶ್ಯಕತೆ ಇದೆ. ೩೦೦ ರಿಂದ ೩೫೦ ಕೆಜಿ ಪ್ರಮಾಣದ ಆಹಾರ ಅಗತ್ಯತೆ ಇದೆ. ಆಹಾರದ ಕೊರತೆ ಎದುರಾದಾಗ ನಾಡಿಗೆ ಆಗಮಿಸುವ ಕಾಡಾನೆಯಿಂದ ಬೆಳೆ ನಾಶ ಜೊತೆಗೆ ಮಾನವ ಜೀವ ಹಾನಿಯಾಗುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ ಎಂದು ಶಕ್ತಿಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳು ಅಲ್ಪ ಪ್ರಮಾಣದ ಆಹಾರ ಪಡೆಯಲು ಬಂದ ಸಂದರ್ಭ ಅಪಾರ ಪ್ರಮಾಣದ ಬೆಳೆ ಹಾನಿ ಆಗುತ್ತಿರುವುದು ಹಾಗೂ ಈ ಸಂದರ್ಭದಲ್ಲಿ ಅನಾಹುತಗಳು ಎದುರಾಗುವುದು ಸಾಮಾನ್ಯ ಎನ್ನುತ್ತಾರೆ.
ಅರಣ್ಯ ನಾಶ, ಕಾಡ್ಗಿಚ್ಚು, ಮಾನವ ನಿರ್ಮಿತ ಸಮಸ್ಯೆ.. ಇದರಿಂದ ವಲಸೆ ಹೋಗುವ ಪ್ರಾಣಿಯಾದ ಕಾಡಾನೆಗಳು ತಮ್ಮ ಅಸ್ತಿತ್ವಕ್ಕೆ ಹೋರಾಟ ಮಾಡುವಂತಾಗಿದೆ ಎಂದು ಅವರು ಹೇಳುತ್ತಾರೆ.
ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಆನೆಕಾಡು, ಅತ್ತೂರು, ಮಾಲ್ದಾರೆ, ದುಬಾರೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಲುವಾಗಿ ೨೨ ಕೆರೆಗಳನ್ನು ನಿರ್ಮಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಕೆ ವಿ ಶಿವರಾಮ್ ಮಾಹಿತಿ ಒದಗಿಸಿದ್ದಾರೆ. ಬೇಸಿಗೆ ಅವಧಿಯಲ್ಲಿ ಕೂಡ ಕೆರೆಗಳಲ್ಲಿ ನೀರಿನ ಸೆಲೆ ಇರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ವಿವಿಧೆಡೆ ನಿರಂತರವಾಗಿ ಕಾಡಾನೆ ಹಾವಳಿಯಿಂದ ನಷ್ಟಕ್ಕೆ ಒಳಗಾದ ಬೆಳೆಗಾರರಿಗೆ ಇಲಾಖೆಯಿಂದ ನಷ್ಟ ಪರಿಹಾರ ಕೂಡ ನೀಡಲಾಗುತ್ತಿದೆ. ಒಂದು ವರ್ಷದ ಅವಧಿಯಲ್ಲಿ ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಸುಮಾರು ೫೯೮ ಪ್ರಕರಣಗಳಲ್ಲಿ ೫೦ ಲಕ್ಷಕ್ಕೂ ಹೆಚ್ಚಿನ ಪರಿಹಾರ ಒದಗಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ವಿವರ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನೆಮ್ಮದಿ ಕಳೆದುಕೊಂಡ ಕೆಲವು ಆನೆಗಳು ಅರಣ್ಯ ಇಲಾಖೆಯ ಕಾರ್ಯಾಚರಣೆ ತಂಡದ ಸದಸ್ಯರ ಮೇಲೂ ದಾಳಿ ಮಾಡುತ್ತಿರುವುದು ಇನ್ನೂ ಆತಂಕಕಾರಿ ಬೆಳವಣಿಗೆಯಾಗಿದೆ. ಆನೆಗಳ ರಕ್ಷಣೆಗಾಗಿಯೇ ‘ಎಲಿಫೆಂಟ್ ಪ್ರಾಜೆಕ್ಟ್’ಗಳು ಕಾರ್ಯ ನಿರ್ವಹಿಸುತ್ತಿದ್ದು ಇದರ ಸಿಬ್ಬಂದಿಗಳು ಇದೀಗ ಜೀವ ಅಪಾಯವನ್ನು ಎದುರಿಸುವಂತಹ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಿಸುವಂತಾಗಿದೆ.
ಜಮೀನಿನ ಸುತ್ತ ಅಳವಡಿಸುತ್ತಿರುವ ವಿದ್ಯುತ್ ಬೇಲಿ, ಅರಣ್ಯ ಗ್ರಾಮದ ಅಂಚಿನಲ್ಲಿ ಕಾಣುತ್ತಿರುವ ಸೋಲಾರ್ ತಂತಿಗಳು, ಅರಣ್ಯ ಮತ್ತು ಗಡಿಭಾಗಗಳಲ್ಲಿ ನಿರ್ಮಾಣವಾಗಿರುವ ಕಂದಕಗಳು, ಇದೀಗ ಉದ್ದಕ್ಕೂ ನಿರ್ಮಾಣವಾಗುತ್ತಿರುವ ರೈಲ್ವೆ ಕಂಬಿಗಳು ಈ ಮೂಲಕ ಅರಣ್ಯದಲ್ಲಿ ಬಂಧಿಯಾಗುತ್ತಿರುವ ವನ್ಯಜೀವಿಗಳು ನೆಮ್ಮದಿಯನ್ನು ಕಳೆದುಕೊಳ್ಳುತ್ತಿವೆ.
ಒಟ್ಟಾರೆ ಹೇಳುವುದಾದರೆ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ಬದಲು ಕೊಡಗು ಜಿಲ್ಲೆಯಲ್ಲಿ ಆನೆ ಮಾರ್ಗವನ್ನು ಇಲಾಖೆ ಅಧಿಕಾರಿಗಳು ಸ್ಥಳಾಂತರಗೊಳಿಸುವ ಯೋಜನೆ ರೂಪಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಆನೆ ಸಂತತಿ ಹೆಚ್ಚುತ್ತಿರುವುದು ಆನೆ ಕಾರಿಡಾರ್ ಬಹುಪಾಲು ನಾಶವಾಗಿರುವುದು, ಅರಣ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ಆಹಾರ ಕೊರತೆ ಇತ್ಯಾದಿ ಸಮಸ್ಯೆಗಳು ಆನೆಗಳನ್ನು ಅನಿವಾರ್ಯವಾಗಿ ಗ್ರಾಮ ಹಳ್ಳಿಗಳ ಕಡೆ ಎಳೆದು ತರುತ್ತಿವೆ. ಪ್ರಾಣಿ- ಮನುಷ್ಯ ನೇರ ಕದನ ಮಾಡುವಂತೆ ಕಂಡುಬರುತ್ತದೆ. ಈ ಎಲ್ಲಾ ಸಮಸ್ಯೆಯಿಂದ ನೆಮ್ಮದಿ ಕಳೆದುಕೊಂಡಿರುವ ಬೆಳೆಗಾರರಿಗೆ ಕಚೇರಿಗೆ ಅಲೆದಾಡುವ ಮೂಲಕ ಅಲ್ಪ ಪರಿಹಾರ ದೊರಕುತ್ತಿದೆ.
ಅರಣ್ಯದ ಒಳಭಾಗದಲ್ಲಿ ವೈವಿಧ್ಯಮಯ ಮರ ಗಿಡಗಳನ್ನು ಬೆಳೆಸಬೇಕು. ವನ್ಯಜೀವಿಗಳಿಗೆ ಅಗತ್ಯವಿರುವ ಆಹಾರ ಅರಣ್ಯದ ಒಳಭಾಗದಲ್ಲಿ ದೊರಕಬೇಕು. ಕಾಡಾನೆಗಳ ಸಮಸ್ಯೆ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಶಾಶ್ವತ ಯೋಜನೆಗಳನ್ನು ರೂಪಿಸಬೇಕು. ಪಶ್ಚಿಮ ಘಟ್ಟದ ಭಾಗದಲ್ಲಿ ಭದ್ರವಾಗಿರುವ ಕಾಡಾನೆಗಳ ವಲಸೆ ಮಾರ್ಗವನ್ನು ಪುನಹ ನಿರ್ಮಿಸಬೇಕು ಎನ್ನುವುದು ಪ್ರತಿಯೊಬ್ಬ ನಾಗರಿಕರ ಅಭಿಪ್ರಾಯವಾಗಿದೆ.ಕುಶಾಲನಗರ ತಾಲೂಕಿನ ವ್ಯಾಪ್ತಿಯ ಅತ್ತೂರು ಮೀಸಲು ಅರಣ್ಯ ಸುಮಾರು ೨,೦೮೬ ಹೆಕ್ಟರ್ ವ್ಯಾಪ್ತಿಯಲ್ಲಿದ್ದು, ಆನೆಕಾಡು ಮೀಸಲು ಅರಣ್ಯ ೨,೯೯೧ ಹೆಕ್ಟೇರ್ ಅರಣ್ಯವನ್ನು ಒಳಗೊಂಡಿದೆ. ದುಬಾರೆ ಮೀಸಲು ಅರಣ್ಯ ೪,೬೦೦ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಹೊಂದಿದ್ದರೆ ತಾಲೂಕಿನ ಚೇರಳ ಮೀಸಲು ಅರಣ್ಯ ೧೫೧ ಹೆಕ್ಟೇರ್ ಅರಣ್ಯದ ವ್ಯಾಪ್ತಿಯನ್ನು ಒಳಗೊಂಡಿದ್ದು ಈ ವ್ಯಾಪ್ತಿಯ ಅರಣ್ಯದ ಒಳಗಡೆ ಸುಮಾರು ೫೦ಕ್ಕೂ ಅಧಿಕ ಕಾಡಾನೆಗಳು ನೆಲೆ ಕಂಡಿವೆ. ಇದರೊಂದಿಗೆ ನೆರೆಯ ಪಿರಿಯಾಪಟ್ಟಣ ಭಾಗದಿಂದ ಆಹಾರ ಅರಸಿ ಬರುವ ಆನೆಗಳು ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳುತ್ತಿವೆ ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಂ ಶಕ್ತಿಗೆ ಅಂಕಿ ಅಂಶಗಳನ್ನು ನೀಡಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಇದುವರೆಗೆ ಒಟ್ಟು ೮ ಮಂದಿ ಮೇಲೆ ಆನೆ ದಾಳಿ ಮಾಡಿದ್ದು ಮೃತಪಟ್ಟಿರುವ ಘಟನೆಯು ವರದಿಯಾಗಿದೆ. ತಾಲೂಕು ವ್ಯಾಪ್ತಿಯ ಅವರೆಗುಂದ, ಕಬ್ಬಿನ ಗದ್ದೆ ಮೋದೂರು, ನಂಜರಾಯಪಟ್ಟಣ, ನೆಲ್ಲಿಹುದಿಕೇರಿ, ಮಾಲ್ದಾರೆ, ಅಮ್ಮಂಗಾಲ, ಕೂಡ್ಲೂರು ಚೆಟ್ಟಳ್ಳಿ ವ್ಯಾಪ್ತಿಯ ಎಂಟು ಜನ ಮೃತಪಟ್ಟಿರುವುದು ಗಮನಿಸಬಹುದು. ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ ತಲಾ ೧೫ ಲಕ್ಷ ಪರಿಹಾರ ಕೂಡ ಒದಗಿಸಲಾಗಿದೆ.
ವಿಶೇಷವೆಂದರೆ ಪ್ರಕೃತಿ ವಿಕೋಪ ಸಂದರ್ಭ ೨೦೧೮ರಲ್ಲಿ ಆನೆ ಮಾನವ ಸಂಘರ್ಷ ಶೂನ್ಯ ಪ್ರಮಾಣದಲ್ಲಿ ಕಂಡು ಬಂದಿರೋದು ಒಂದೆಡೆಯಾದರೆ, ಕೊರೊನಾ ಮಾರಕ ರೋಗ ಸಂದರ್ಭ ಕೂಡ ಯಾವುದೇ ರೀತಿಯ ಸಂಘರ್ಷ ಕಂಡು ಬರಲಿಲ್ಲ. ಬಹುತೇಕ ಮಾನವನ ಹಸ್ತಕ್ಷೇಪವೇ ಸಂಘರ್ಷ ಪ್ರಕರಣಗಳಿಗೆ ಸಾಥ್ ಕೊಡುತ್ತಿವೆ ಎಂದರೆ ತಪ್ಪಾಗಲಾರದು.
ಆನೆಗಳು, ವನ್ಯಜೀವಿಗಳ ಬಗ್ಗೆ ಕೆಲವರು ದ್ವೇಷ ಸಾಧನೆ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿರುವ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಟಿ. ಪೂವಯ್ಯ, ಆನೆಗಳು ಪರಿಸರದ ಒಂದು ಭಾಗವಾಗಿದೆ. ದೇಶದಲ್ಲಿ ೨೭,೦೦೦ ಆನೆಗಳು ನೆಲೆಸಿರುವ ಬಗ್ಗೆ ಅಂದಾಜಿಸಲಾಗಿದ್ದು, ರಾಜ್ಯದಲ್ಲಿ ೬,೦೦೦ ಜಿಲ್ಲೆಯಲ್ಲಿ ಸುಮಾರು ೫೦೦ಕ್ಕೂ ಅಧಿಕ ಆನೆಗಳು ನೆಲೆ ಕಂಡಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಕಾಡಾನೆಗಳ ಸಂರಕ್ಷಣೆ ಮಾನವನ ಆದ್ಯ ಕರ್ತವ್ಯವಾಗಿದೆ.
ಆ ಮೂಲಕ ಮನುಕುಲದ ಉಳಿವು ಸಾಧ್ಯ ಎಂದ ಅವರು ಇಲಾಖೆ ಮೂಲಕ ಆನೆ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಶಕ್ತಿಗೆ ತಿಳಿಸಿದ್ದಾರೆ.