ವೀರಾಜಪೇಟೆ, ಅ. ೬: ಸಮಾಜವು ಸುಶಿಕ್ಷತವಾಗಬೇಕು ಎನ್ನುವುದರ ಹಿಂದೆ ಶಿಕ್ಷಕರ ಪಾತ್ರ ಮತ್ತು ಶ್ರಮ ಅಡಕವಾಗಿದೆ ಎಂದು ಲಯನ್ಸ್ ಕ್ಲಬ್ನ ವಲಯ ಅಧ್ಯಕ್ಷ ಮನ್ನಕಮನೆ ಎ. ಬಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಾಜಪೇಟೆ ಲಯನ್ಸ್ ಕ್ಲಬ್ಗೆ ವಲಯ ಅಧ್ಯಕ್ಷರ ಭೇಟಿ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ವೀರಾಜಪೇಟೆ ಕಿತ್ತೂರು ಠಾಣಿ ಚೆನ್ನಮ್ಮ ರಸ್ತೆ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಬಾಲಕೃಷ್ಣ ಅವರು ಪ್ರಾಥಮಿಕ ಹಂತದಿAದ ಪ್ರೌಢಶಿಕ್ಷಣ ಹಾಗೂ ಕಾಲೇಜು ಶಿಕ್ಷಣದವರೆಗಿನ ಸರ್ವ ರೀತಿಯಾದ ವಿದ್ಯಾರ್ಜನೆಯನ್ನು ವಿದ್ಯಾರ್ಥಿಗೆ ಧಾರೆಯೆರೆದು ಉತ್ತಮ ಪ್ರಜೆಯಾಗಿ ರೂಪಿಸುವಲ್ಲಿ ಶಿಕ್ಷಕರು ಶ್ರಮವಹಿಸುತ್ತಾರೆ.
ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲು ಮಾಡಿದಲ್ಲಿ ತಮ್ಮ ಕರ್ತವ್ಯ ಮುಗಿಯಿತು ಎಂದು ಭಾವಿಸುವುದು ತಪ್ಪು ಕಲ್ಪನೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಳ್ತೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಕುಪ್ಪಂಡ ಗಂಗಮ್ಮ ಅವರು ಪೋಷಕರು ಯಾವುದೇ ಅರಿವಿಲ್ಲದೆ ಶಾಲೆಗೆ ಮಕ್ಕಳನ್ನು ದಾಖಲು ಮಾಡುತ್ತಾರೆ, ಅರಿವು ತುಂಬಲು ಶಿಕ್ಷಕರು ಬೇಕು. ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳನ್ನು ಶಿಕ್ಷಕರು ತಮ್ಮ ಮಕ್ಕಳಂತೆ ಗಮನಿಸಬೇಕು. ಪ್ರೀತಿ ಭಾವದಿಂದ ಆರೈಕೆ ಮಾಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಶಿಕ್ಷಣದ ವಿವಿಧ ಮಜಲುಗಳ ಮೇಲೆ ಆಸಕ್ತಿ ಹೊಂದುವAತೆ ಪ್ರಯತ್ನಿಸಬೇಕು ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕರ್ಣಂಡ ಜಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಲಯನ್ಸ್ ಕ್ಲಬ್ ವೀರಾಜಪೇಟೆಯು ೪೭ ವರ್ಷಗಳನ್ನು ಪೂರೈಸಿದೆ. ತಮ್ಮ ಸೇವಾ ಅವಧಿಯು ಪ್ರಾರಂಭವಾಗಿದ್ದು ತಿಂಗಳಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶ ಕಂಡಿದ್ದೇವೆ. ಮುಂದೆಯೂ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ನಿರ್ಧಾರ ಕೈಗೊಂಡಿರುತ್ತೇವೆ ಎಂದು ಹೇಳಿದರು.
ಕಾರ್ಯದರ್ಶಿಗಳಾದ ಪಟ್ಟಡ ವಿಕ್ರಂ ಚೆಂಗಪ್ಪ ವರದಿ ವಾಚಿಸಿದರು, ವೇದಿಕೆಯಲ್ಲಿ ಖಜಾಂಚಿಗಳಾದ ಕೆ.ಪಿ. ನಿಯಾಜ್, ವಕೀಲರಾದ ಪುಷ್ಪರಾಜ್ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ವೀರಾಜಪೇಟೆಯ ಅಧ್ಯಕ್ಷರಾದ ಕರ್ಣಂಡ ಜಯ ಅವರು ಸರ್ವರನ್ನು ಸ್ವಾಗತಿಸಿ, ಕಾರ್ಯದÀರ್ಶಿ ಪಟ್ಟಡ ವಿಕ್ರಂ ಚೆಂಗಪ್ಪ ವಂದಿಸಿದರು.
ಕಾರ್ಯಕ್ರಮದಲ್ಲಿ ವೀರಾಜಪೇಟೆ ಲಯನ್ಸ್ ಕ್ಲಬ್ನ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸದಸ್ಯರು ಸೇರಿದಂತೆ ವಿವಿಧ ಶಾಖೆಗಳ ಪದಾಧಿಕಾರಿಗಳು ಹಾಜರಿದ್ದರು.