ವೀರಾಜಪೇಟೆ, ಅ. ೬: ಹಬ್ಬ ಹರಿದಿನಗಳನ್ನು ಒಗ್ಗಟ್ಟಿನಿಂದ ಎಲ್ಲರು ಸೇರಿ ಶಾಂತಿಯುತವಾಗಿ ಆಚರಿಸುವಂತಾಗಬೇಕು. ಇದಕ್ಕೆ ಪೊಲೀಸ್ ಇಲಾಖೆಯ ಸಹಕಾರವು ಅಗತ್ಯ ಎಂದು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು. ವೀರಾಜಪೇಟೆ ನಗರದ ಜೈನರ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಶ್ರೀ ಗೌರಿ ಗಣೇಶೋತ್ಸವ ಸಮಾರೋಪ ಸಮಾರಂಭದಲ್ಲಿ `ಕಾಂತಾರ ಚಲನಚಿತ್ರ ವರಾಹ ರೂಪಂ ಹಾಡು ರಚಿಸಿದ ಸಾಹಿತಿ ಶಶಿರಾಜ್ ರಾವ್ ಕಾವೂರು ಇವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ' ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕಾಂತಾರ ಚಲನಚಿತ್ರಕ್ಕೆ ಹಾಡು ರಚಿಸಿದ ವಕೀಲ ಶಶಿರಾಜ್ ರಾವ್ ಕಾವೂರು ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿ, ವೀರಾಜಪೇಟೆ ಶಾಸಕರು ಮುಖ್ಯಮಂತ್ರಿ ಕಾನೂನು ಸಲಹೆಗಾರರ ಮುಖಾಂತರ ಹಾಗೂ ಬಸವೇಶ್ವರ ದೇವಸ್ಥಾನದಲ್ಲಿ ಬಸವಶ್ರೀ ಪ್ರಶಸ್ತಿ ಪಡೆದುಕೊಂಡಿರುವುದು ನಾನು ಆಭಾರಿಯಾಗಿದ್ದೇನೆ ಎಂದರು. ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿ ಅಧ್ಯಕ್ಷರು ಹಿರಿಯ ವಕೀಲರಾದ ಎನ್.ಜಿ. ಗೋಪಾಲಕೃಷ್ಣ ಕಾಮತ್ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಸನ್ಮಾನಿಸಿ ಗೌರವಿಸಿದರು.

ವೇದಿಕೆಯಲ್ಲಿ ಗೌರಿ ಗಣೇಶ ಜನೋತ್ಸವ ಸಮಿತಿಯ ಗೌರವ ಅಧ್ಯಕ್ಷ ಕೆ.ಸಿ. ಶಭರೀಶ್, ಮೂಸೂರಿನ ದಿಲೀಪ್ ಶೇಠ್, ವಕೀಲ ಡಿ.ಸಿ. ದ್ರುವ ಕುಮಾರ್, ದೇವಸ್ಥಾನ ಸಮಿತಿಯ ಸಂಪತ್ ಕುಮಾರ್, ಪುಷ್ಪರಾಜ್ ಉಪಸ್ಥಿತರಿದ್ದರು. ವಕೀಲ ನರೇಂದ್ರ ಕಾಮತ್ ಸ್ವಾಗತಿಸಿ ನಿರೂಪಿಸಿದರು. ನಂತರ ತರೀಕೆರೆ ಗೀತಾಂಜಲಿ ಆರ್ಕೆಸ್ಟಾç ಇವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು.