ಕುಶಾಲನಗರ, ಅ. ೬: ಕುಶಾಲನಗರದ ಕೃಷಿ ಮಾರುಕಟ್ಟೆ ಆವರಣದಲ್ಲಿ ಅರಣ್ಯ ಇಲಾಖೆ ಆಶ್ರಯದಲ್ಲಿ ಸ್ಥಳೀಯ ವಾಕರ್ಸ್ ಅಸೋಸಿಯೇಷನ್, ಕೊಡಗು ಪ್ರೆಸ್ ಕ್ಲಬ್ ಹಾಗೂ ಎಲ್‌ಐಸಿ ಸಂಸ್ಥೆಯ ಸಹಯೋಗದೊಂದಿಗೆ ನಡೆದ ಎರಡನೇ ಹಂತದ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಗಿಡ ನೆಡುವುದರೊಂದಿಗೆ ಅದರ ನಿರ್ವಹಣೆ ಪೋಷಣಾ ಕಾರ್ಯ ನಿರಂತರವಾಗಿ ನಡೆಯಬೇಕಾಗಿದೆ. ಸಾರ್ವಜನಿಕರು ಕೈಜೋಡಿಸುವ ಮೂಲಕ ಉತ್ತಮ ಪ್ರಕೃತಿ ನಿರ್ಮಾಣ ಸಾಧ್ಯ ಎಂದು ಇಲಾಖಾ ಸಿಬ್ಬಂದಿ ಸಿದ್ದರಾಮೇಶ್ ಮನವಿ ಮಾಡಿದರು. ಆರ್‌ಎಂಸಿ ಆವರಣದಲ್ಲಿ ವಾಕರ್ಸ್ ಅಸೋಸಿಯೇಷನ್ ಸದಸ್ಯರ ಸಹಯೋಗದೊಂದಿಗೆ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಂ ಮತ್ತು ಉಪ ವಲಯ ಅರಣ್ಯ ಅಧಿಕಾರಿ ದೇವಯ್ಯ ನೇತೃತ್ವದಲ್ಲಿ ಈ ಹಿಂದೆ ೨೫೦ ಗಿಡಗಳನ್ನು ನೆಡಲಾಗಿತ್ತು.

೨ನೇ ಹಂತದಲ್ಲಿ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಅಂಗವಾಗಿ ೨೫ ಗಿಡಗಳು ಸೇರಿದಂತೆ ಒಟ್ಟು ೨೦೦ ಗಿಡಗಳನ್ನು ನೆಡುವ ಕಾರ್ಯಕ್ರಮ ಬೆಳಿಗ್ಗೆ ಏಳರಿಂದ ಎರಡು ಗಂಟೆಗಳ ಕಾಲ ಹಮ್ಮಿಕೊಳ್ಳಲಾಯಿತು.

ವಾಕರ್ಸ್ ಅಸೋಸಿಯೇಷನ್ ಸಂಚಾಲಕರು ಹಾಗೂ ಪ್ರೆಸ್‌ಕ್ಲಬ್ ಬೆಳ್ಳಿ ಹಬ್ಬ ಆಚರಣೆ ಸಮಿತಿಯ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ವಾಕರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಎಚ್.ಟಿ. ರವಿ, ವೆಂಕಟೇಶ್, ಅಶೋಕ್, ಕುಮಾರ್, ಜೀವ ವಿಮಾ ನಿಗಮದ ಕುಶಾಲನಗರದ ಶಾಖೆಯ ಋಷಿ, ಅಶೋಕ್, ದುರ್ಗೇಶ್, ದಿನೇಶ್ ಕುಮಾರ್, ಯೋಗೇಶ್, ಸಿದ್ದ ಪಾಲ್ಗೊಂಡಿದ್ದರು.