(ಕಳೆದ ಸಂಚಿಕೆಯಿAದ) ಕೊಡವರ ಬಾಳೋಪಾಟ್ ಕೇವಲ ಜಾನಪದ ಗೀತೆಯಲ್ಲ. ಅದು ಕೊಡವರ ಭಗವದ್ಗೀತೆಗೆ ಸಮಾನ. ಕೊಡವರ ಬಾಳೋಪಾಟ್ ಅರ್ಥ ಮಾಡಿಕೊಂಡರೆ ಅವರ ಬದುಕಿನ ಪ್ರತಿಯೊಂದು ಕ್ರಮವನ್ನು ಅರ್ಥ ಮಾಡಿಕೊಳ್ಳುವುದಲ್ಲದೆ, ಅವರ ಪದ್ಧತಿಯ ಶ್ರೇಷ್ಠತೆ ಏನು ಎನ್ನುವುದು ಅರ್ಥವಾಗುತ್ತದೆ. ಜಾನಪದ ಗೀತೆ ಸೃಷ್ಟಿಯಾದ ಕಾಲವನ್ನು ಹೇಗೆ ತಿಳಿಯಲು ಸಾಧ್ಯವಿಲ್ಲವೊ, ಅದೇ ರೀತಿ ಕೊಡವರ ಬಾಳೋಪಾಟ್‌ನ ಕಾಲಮಾನವನ್ನು ತಿಳಿಯಲು ಸಾಧ್ಯವಿಲ್ಲ. ಕಾಲಕಾಲಕ್ಕೆ ತಕ್ಕಂತೆ ಬದಲಾವಣೆ ಗಳನ್ನು ರೂಡಿಸಿಕೊಂಡು ಬಂದಿದೆ. ಮೂಲ ಬಾಳೋಪಾಟ್‌ಗೂ ಈಗಿನ ಬಾಳೋಪಾಟ್‌ಗೂ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದು. ಪ್ರಕೃತಿಯಲ್ಲಿನ ಬದಲಾವಣೆ, ಪದ್ಧತಿಯಲ್ಲಿನ ಬದಲಾವಣೆ, ಆಡಳಿತದಲ್ಲಿನ ಬದಲಾವಣೆ ಯಿಂದಾಗಿ ಅವರ ಬಾಳೋಪಾಟ್ ನಲ್ಲಿಯೂ ಕೆಲವೊಂದು ಬದಲಾವಣೆಗಳು ಆಗಿವೆ. ರಾಜರು ಬಂದ ನಂತರ ಅವರ ವಿಷಯಗಳು ಸೇರಿವೆ. ಪ್ರಕೃತಿಯ ದುರಂತ ಹಾಗೂ ಕೊಡುಗೆಗಳನ್ನು ಕಾಲಕ್ಕೆ ಸರಿಯಾಗಿ ಅಳವಡಿಸಿಕೊಳ್ಳಲಾಗಿದೆ. ಭಾಷೆಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳಾಗಿರುವುದನ್ನು ಗಮನಿಸಬಹುದು.

ಅದರೆ, ಇಂದಿಗೂ ಅದರ ಹಲವು ಮೂಲತನವನ್ನು ಉಳಿಸಿಕೊಂಡಿದೆ. ಬಾಳೋಪಾಟ್‌ನ ರಾಗ, ತಾಳ, ಅರ್ಥ ವಿಶೇಷವಾದುದು. ಇವುಗಳಲ್ಲಿ ಕೊಡವರ `ಚಾವ್ ಪಾಟ್’ ಅಂದರೆ ಮರಣದ ಸಂದರ್ಭ ಹಾಡುವ ಗೀತೆಯಂತೂ ಶ್ರೇಷ್ಠ ಸಾಹಿತ್ಯದಿಂದ ಕೂಡಿದೆ. ಅದರ ಅರ್ಥ, ಶೈಲಿ, ಬದುಕಿನ ನೀತಿ ಪಾಠ, ಕೊಡವರ ವೀರತ್ವ, ಅವರ ಬದುಕಿನ ಕ್ರಮ ಸೇರಿದಂತೆ ಕೊಡವರ ಪ್ರತಿಯೊಂದು ನಡೆಯನ್ನು ಅದರಲ್ಲಿ ಕಟ್ಟಿಕೊಡಲಾಗಿದೆ. ಹಿಂದಿನ ಯಾವುದೇ ಸಾಹಿತ್ಯವನ್ನು ತೆಗೆದುಕೊಳ್ಳಿ. ಕನ್ನಡ, ತಮಿಳು, ಸಂಸ್ಕöÈತ, ಪಾಳಿ, ಪ್ರಾಕೃತ ಅಥವಾ ಇನ್ಯಾವುದೇ ಭಾಷೆಯಲ್ಲಿನ ಕಾವ್ಯವನ್ನು ಗಮನಿಸಿ ದಾಗ ಅದರಲ್ಲಿರುವ ಉಪಮಾನ, ಉಪಮೇಯ, ರೂಪಕ ಅಲಂಕಾರಗಳು ಅದ್ಭುತವಾಗಿರುತ್ತಿದ್ದವು. ರೂಪಕಗಳಿಲ್ಲದ ಕಾವ್ಯವನ್ನು ಕಲ್ಪಿಸಿಕೊಳ್ಳಲು ಸಾಧ್ಯವೆ ಇರುತ್ತಿರಲಿಲ್ಲ. ಉದಾಹರಣೆಗೆ ಕುಮಾರವ್ಯಾಸನ ಕರ್ನಾಟಕ ಕಥಾ ಮಂಚರಿ ರೂಪಕಗಳು ಅದ್ಭುತ. ಅಂದರೆ, ಯಾವುದೇ ವಿಷಯವನ್ನು ನೇರವಾಗಿ ಹೇಳಿದರೆ, ಅವುಗಳನ್ನು ಮತ್ತೊಂದು ವಿಷಯದೊಂದಿಗೆ ಹೋಲಿಸಿ, ಅದರಂತೆ ಎಂದು ಹೇಳುವುದು. ಇದನ್ನು ಕಾವ್ಯದ ಗುಣಕ್ಕೆ ಅನುಗುಣವಾಗಿ, ಪ್ರಾಸಬದ್ಧವಾಗಿ ಹೇಳುವುದು ಅದ್ಭುತ ಪ್ರತಿಭೆ, ಎಲ್ಲರಿಗೂ ಸಾಧ್ಯವಿಲ್ಲ.

ಇದೇ ರೀತಿ, ಕೊಡವರ ಶೋಕಗೀತೆ ಅಥವಾ ಚಾವ್‌ಪಾಟ್ ಅನ್ನು ಗಮನಿಸಿದಾಗ ಕೊಡವ ಹಿರಿಯರ ಕವಿತ್ವಾಶಕ್ತಿಗೆ ತಲೆಬಾಗಲೇಬೇಕು. ಅಂದಿನ ಕಾಲದಲ್ಲಿ ಹೊರಗಿನ ಸಾಹಿತ್ಯ, ಭಾಷೆಯ ಅರಿವು ಇಲ್ಲದಿದ್ದರೂ ಕೂಡ ಅವರು ಹೋಲಿಕೆ ಮಾಡಿ ರಚಿಸಿದ ಚಾವ್‌ಪಾಟ್ ಇಂದಿಗೂ ಶ್ರೇಷ್ಠ ಸಾಹಿತ್ಯ ದಿಂದ, ಉಪಮಾನ, ಉಪಮೇಯ, ರೂಪಕ ಅಲಂಕಾರಗಳಿAದ ಕೂಡಿದೆ. ಯಾವುದೇ ಬರವಣಿಗೆ ಇಲ್ಲದೆ ಸಾವಿರಾರು ವಾಕ್ಯಗಳನ್ನು ಮೌಖಿಕವಾಗಿ ಉಳಿಸಿಕೊಂಡು ಬಂದಿರುವುದು ಮತ್ತೊಂದು ಹೆಗ್ಗಳಿಕೆ.

ಇಲ್ಲಿ ಕೊಡವರ ಶೋಕಗೀತೆ ಅಥವಾ ಚಾವ್‌ಪಾಟ್‌ನಲ್ಲಿರುವ ವಿಶೇಷತೆ ಹಾಗೂ ಅಲಂಕಾರಗಳನ್ನು ಗಮನಿಸೋಣ: ನಾಲ್ಕು ಮಂದಿ ದುಡಿಕೊಟ್ಟ್ ನೊಂದಿಗೆ ಚಾವ್‌ಪಾಟ್ ಹಾಡುತ್ತಾರೆ. ಈ ಹಾಡು ಸುದೀರ್ಘವಾಗಿದೆ. ಆ ವ್ಯಕ್ತಿಯ ಹುಟ್ಟಿನಿಂದ ಇಂದಿನ ತನಕ ಆತನ ಎಲ್ಲಾ ಬೆಳವಣಿಗೆ, ಕಷ್ಟು ಸುಖ, ಆತನ ವೀರತ್ವ, ಒಳ್ಳೆಯ ಗುಣ, ಕೆಟ್ಟ ಗುಣ ಎಲ್ಲವನ್ನೂ ಹಾಡಿನ ರೂಪದಲ್ಲಿಯೇ ಕಟ್ಟಿಕೊಡಲಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ, ಕುಟುಂಬದಿAದ ಕುಟುಂಬಕ್ಕೆ, ಹಳ್ಳಿಯಿಂದ ಹಳ್ಳಿಗೆ ಇದರಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಬದಲಾವಣೆ ಗಳನ್ನು ಕಾಣಬಹುದು. ಆದರೆ, ಸಾರ ಒಂದೇ ಆಗಿದೆ. ಸಾಮಾನ್ಯವಾಗಿ ಕೊಡವರ ಚಾವ್‌ಪಾಟ್‌ನಲ್ಲಿ ಎರಡು ಇಲ್ಲವೆ ಮೂರು ಪದಗಳಿವೆ. ಇವೆಲ್ಲವೂ ಪ್ರಾಸಬದ್ಧವಾಗಿದೆ. ಪ್ರತಿಯೊಂದು ಘಟನೆಯನ್ನೂ ಬೇರೊಂದು ವಿಷಯ ದೊಂದಿಗೆ ಹೋಲಿಕೆ ಮಾಡಲಾಗಿದೆ. ವಾಕ್ಯದ ಕೊನೆಯಲ್ಲಿ ಪುರುಷರಿಗೆ ಅಜ್ಜಯ್ಯ ಎಂದು ಮಹಿಳೆ ಸತ್ತರೆ ಅಕ್ಕಯ್ಯ ಎಂದು ಸೇರಿಸಿಕೊಳ್ಳುತ್ತಾರೆ. ಬಹುಶಃ ಇತರ ಎಲ್ಲಾ ಹಾಡುಗಳಿಗಿಂತ ಚಾವ್ ಪಾಟ್ ಹೆಚ್ಚು ಗಮನ ಸೆಳೆಯುತ್ತದೆ. ವ್ಯಕ್ತಿಯ ಗುಣಗಾನ ಮಾಡುವ ರೀತಿಯಿಂದ ಅಲ್ಲಿ ಸೇರಿರುವ ಎಲ್ಲರ ಕಣ್ಣಲ್ಲಿ ನೀರು ಹರಿಯುವಂತೆ ಮಾಡುತ್ತದೆ. ದುಃಖ ಉಮ್ಮಳಿಸಿ ಬರುತ್ತದೆ.

``ಕೆಟ್ಟಿರೊ ಅಜ್ಜಯ್ಯ ನಿಂಗ, ಕೆಟ್ಟ್ನನ್ನಕೆ ಕೆಟ್ಟ್ಲೇ ಅಜ್ಜಯ್ಯ

ಕೆಟ್ಟ್ಪೋನ ಕೇಡೇ ಅಜ್ಜಯ್ಯ, ನಿಂಗ ಕೆಟ್ಟ ಕೇಡೇ ಅಜ್ಜಯ್ಯ

ಚೋತಿರೋ ಅಜ್ಜಯ್ಯ ನಿಂಗ, ಚೋತನ್ನಕೆ ಚೋತ್‌ಲೇ ಅಜ್ಜಯ್ಯ’’

ಕೆಟ್ಟಿರೋ ಎಂದರೆ ಬದುಕು ಮುಗಿಯಿತು, ಹೊತ್ತೊಕೊಂಡು ಹೋಗಿ ಎನ್ನುವ ಅರ್ಥ. ಅಂದರೆ, ಚಟ್ಟವನ್ನು ಹೊತ್ತುಕೊಂಡು ಹೋಗುವುದನ್ನು ಸಂಕೇತಿಸುತ್ತದೆ. ಇಲ್ಲಿ ಪ್ರಾಸಬದ್ಧವಾಗಿ ಮರಣ ಹೊಂದಿರುವುದನ್ನು ತಿಳಿಸಲಾಗಿದೆ. ಕೆಟ್ಟ್ನನ್ನಕೆ ಕೆಟ್ಟ್ಲೆ ಎಂದರೆ, ಚಟ್ಟವನ್ನು ವಿಶೇಷವಾಗಿ ಕಟ್ಟುತ್ತಾರೆ. ಅದಕ್ಕೆ, ಕಟ್ಟಿದಂತೆ ಕಟ್ಟಲಿಲ್ಲ ಎನ್ನುತ್ತಾರೆ. `ಚೋತನ್ನಕೆ ಜೋತ್‌ಲೆ’ ಅಂದರೆ, ಸೋತಂತೆ ಸೋಲಲಿಲ್ಲ ಎನ್ನುವುದು ಕೂಡ ಅಂತ್ಯವನ್ನು ತಿಳಿಸಲಾಗಿದೆ. ಸೋಲು ಮನುಷ್ಯನ ಬದುಕಿನಲ್ಲಿ ಸಾಮಾನ್ಯ. ನಿತ್ಯ ಸೋತ ನಂತರ ಗೆಲುವು ಖಚಿತ. ಆದರೆ, ಸಾವಿನಲ್ಲಿ ಇನ್ನು ಗೆಲುವು ಅಥವಾ ಪ್ರಯತ್ನವೇ ಇರುವುದಿಲ್ಲ. ಈ ಕಾರಣಕ್ಕೆ ಸೋತಂತೆ ಸೋಲಲಿಲ್ಲ. ಇನ್ನು ಸೋಲು, ಗೆಲ್ಲುವ ಪ್ರಮೇಯವೇ ಬರುವುದಿಲ್ಲ ಎಂದು ತಿಳಿಸಲಾಗಿದೆ.

`ಬಾವ ಕಾಲ ಬುದ್ದಿರೋ -ಬದುಕುವ ಕಾಲದಲ್ಲಿಯೇ ಅಂತ್ಯವಾದೀರಿ

ಬಾವಕ್ ಕೊದಿಚಿರೊ- ಬದುಕವ ಆಸೆಯನ್ನು ಇಟ್ಟುಕೊಂಡಿದ್ದೀರಿ

ಚಾವ್‌ಕ್ ಮಡಿಚಿರೊ- ಸಾಯಲು ಹಿಂದೇಟು ಹಾಕಿದ್ದೀರಿ

ಬಾವ ಕೊದಿ ಎತ್ತ್ಲೆ - ಬದುಕುವ ಆಸೆ ಈಡೇರಲಿಲ್ಲ

ಚಾವ ಕೇಡ್ ಎತ್ತ್ಚೋ - ಸಾಯುವ ಅನಿವಾರ್ಯ ಬಂತು

ಕಾಲ ಪೋಯಿ ಬಪ್ಪದೊ -ಕಾಲ ಮರಳಿ ಬರುವುದ ಸಹಜ

ಕಾಲತೋಡೆ ಬಾತಲ್ಲಾ-ಆದರೆ, ಕಾಲಕೂಡಿ ಬಂದಿದೆ.

ಬದುಕುವ ಕಾಲದಲ್ಲಿಯೇ ಸಾಯಬೇಕಾಯಿತು. ಸಾಮಾನ್ಯವಾಗಿ ಕಷ್ಟವೆಲ್ಲ ಮುಗಿದು ಸುಖಪಡಬೇಕಾದ ಕಾಲದಲ್ಲಿಯೇ ಸತ್ತುಹೋದರು ಎಂದು ಹೇಳುವುದನ್ನು ಕೇಳಿರಬಹುದು. ಇಲ್ಲಿ ಅದೇ ಭಾವವನ್ನು ವ್ಯಕ್ತಪಡಿಸಲಾಗಿದೆ. ಇನ್ನೂ ಸಾಕಷ್ಟು ಬದುಕಬೇಕಿತ್ತು. ಇನ್ನೂ ಬದುಕಬೇಕು ಎನ್ನುವ ಆಸೆ ಇತ್ತು. ಅದಕ್ಕಾಗಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ಆಸೆ ಈಡೇರಿಲಿಲ್ಲ. ಅಂತ್ಯ ಕಾಲ ಬಂದೇ ಬಂತು ಎಂದು ಹೇಳಲಾಗಿದೆ. (ಮುಂದುವರಿಯುವುದು)

-ಐತಿಚAಡ ರಮೇಶ್ ಉತ್ತಪ್ಪ, ಮೈಸೂರು

iu.ಡಿಚಿmesh@gmಚಿiಟ.ಛಿom