ಮುಳ್ಳೂರು, ಅ. ೬: ಶನಿವಾರಸಂತೆ ಅರಣ್ಯ ವಲಯದಲ್ಲಿ ಕಳೆದ ೩ ವರ್ಷಗಳಿಂದ ಕಾರ್ಯನಿರ್ವಹಿಸಿ ರೈತರು ಮತ್ತು ಗ್ರಾಮಸ್ಥರಲ್ಲಿ ಉತ್ತಮ ಬಾಂಧವ್ಯ ಹೊಂದಿದ ವಲಯಾಧಿಕಾರಿ ಪ್ರಫುಲ್ಶೆಟ್ಟಿ ಇದೀಗ ಬಂಟ್ವಾಳಕ್ಕೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಹಿರಿಕರ ಗ್ರಾಮಸ್ಥರು ಮತ್ತು ರೈತರು ಶನಿವಾರಸಂತೆ ವಲಯ ಅರಣ್ಯಧಿಕಾರಿಯವರ ಕಚೇರಿಯಲ್ಲಿ ಇವರನ್ನು ಸನ್ಮಾನಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಶನಿವಾರಸಂತೆ ಗ್ರಾ.ಪಂ. ಉಪಾಧ್ಯಕ್ಷ ಸರ್ದಾರ್ ಅಹಮ್ಮದ್ ಆರ್ಎಫ್ಓ ಪ್ರಫುಲ್ಶೆಟ್ಟಿ ಅವರನ್ನು ಸನ್ಮಾನಿಸಿದ ಬಳಿಕ ಮಾತನಾಡಿ, ಅಧಿಕಾರಿಗಳು ಕಾನೂನು ಚೌಕಟ್ಟಿನೊಳಗೆ ಜನರಿಗೆ ಸೇವೆ ಸಲ್ಲಿಸಿದರೆ ಮಾತ್ರ ಸಾರ್ವಜನಿಕರಲ್ಲಿ ಜನಮನ್ನಣೆಗಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶನಿವಾರಸಂತೆ ವಲಯಾಧಿಕಾರಿ ಪ್ರಫುಲ್ಶೆಟ್ಟಿ ಅವರು ಈ ಭಾಗದಲ್ಲಿ ಕಾನೂನು ಚೌಕಟ್ಟಿನೊಳಗೆ ರೈತರು ಮತ್ತು ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುವುದರ ಮೂಲಕ ಮೆಚ್ಚುಗೆ ಗಳಿಸಿದ್ದರು. ಇವರಂತೆ ಎಲ್ಲಾ ಅಧಿಕಾರಿಗಳು ಮಾದರಿಯಾಗುವ ರೀತಿಯಲ್ಲಿ ಕರ್ತವ್ಯನಿರ್ವಹಿಸುವಂತೆ ಮನವಿ ಮಾಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಒ.ಇ. ಗೋಪಾಲ್ ಮಾತನಾಡಿ, ಅಧಿಕಾರಿಗಳನ್ನು ಸಾರ್ವಜನಿಕರು, ರೈತರು ಸನ್ಮಾನಿಸಿ ಗೌರವಿಸುವುದರಿಂದ ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗುತ್ತದೆ ಉತ್ತಮವಾಗಿ ಕರ್ತವ್ಯನಿರ್ವಹಿಸುವ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರವು ಮುಖ್ಯವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ವಸಂತ್ಕುಮಾರ್, ಮಹೇಂದ್ರಕುಮಾರ್, ಶನಿವಾರಸಂತೆ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಕುಮಾರ್, ಕಾರ್ಯಕ್ರಮ ಆಯೋಜಕ ಶರಣ್, ಪ್ರಮುಖರಾದ ಶಾಹಿದ್ಖಾನ್, ಮುನಿಫ್ ಮುಂತಾದವರು ಇದ್ದರು.