ಮಡಿಕೇರಿ, ಅ. ೫: ಮನುಷ್ಯನ ಆರೋಗ್ಯವನ್ನು ಸದೃಢವಾಗಿರಿಸಲು ರಕ್ತದಾನ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಹೇಳಿದರು.
ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ೨೦೦೨ನೇ ಬ್ಯಾಚ್ನ ಪೊಲೀಸರು ನಗರದ ಪೊಲೀಸ್ ಕಿರು ಸಭಾಂಗಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಮತ್ತು ನೇತ್ರದಾನ ನೋಂದಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಕ್ತದಾನವು ದಾನಗಳಲ್ಲೇ ಅತ್ಯಂತ ಶ್ರೇಷ್ಟ ದಾನವಾಗಿದ್ದು, ರಕ್ತದಾನ ಮಾಡುವುದರಿಂದ ಮತ್ತೊಂದು ಜೀವವನ್ನು ಉಳಿಸಬಹುದಲ್ಲದೆ; ರಕ್ತದಾನ ಮಾಡಿದ ವ್ಯಕ್ತಿಯ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂದು ಸುಂದರ್ರಾಜ್ ನುಡಿದರು.
ಜಿಲ್ಲಾಸ್ಪತ್ರೆಯ ರಕ್ತ ನಿಧಿ ವಿಭಾಗದ ಮುಖ್ಯಸ್ಥ ಡಾ. ಕರುಂಬಯ್ಯ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಅವಶ್ಯಕತೆ ಪ್ರತಿನಿತ್ಯವೂ ಇರುತ್ತದೆ. ಈ ನಿಟ್ಟಿನಲ್ಲಿ ಇಂತಹ ಶಿಬಿರಗಳು ರಕ್ತ ಸಂಗ್ರಹಿಸಲು ಸಹಕಾರಿಯಾಗುತ್ತದೆ. ಪುರುಷರು ೩ ತಿಂಗಳಿಗೊಮ್ಮ, ಮಹಿಳೆಯರು ೪ ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ನಿರಂತರವಾಗಿ ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆ ಆಗುತ್ತದೆ. ದೇಹದಲ್ಲಿ ಕೊಬ್ಬಿನಾಂಶ ಕಡಿಮೆ ಆಗುವುದಲ್ಲದೆ ಹೃದಯ ಸಂಬAಧಿ ಕಾಯಿಲೆಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಮಾಹಿತಿಯಿತ್ತರು.
ವೈದ್ಯಕೀಯ ಕಾಲೇಜಿನ ನೇತ್ರ ಶಾಸ್ತç ವಿಭಾಗದ ಮುಖ್ಯಸ್ಥೆ ಡಾ. ಕೃಪಾಲಿನಿ ಮಾತನಾಡಿ, ನೇತ್ರದಾನ ಮಾಡಿದ ವ್ಯಕ್ತಿಯ ನೇತ್ರವನ್ನು ಆತ ಮೃತಪಟ್ಟ ೬ ಗಂಟೆಯ ಒಳಗಾಗಿ ಸಂಗ್ರಹಿಸಲಾಗುತ್ತದೆ. ೧೦ ರಿಂದ ೧೫ ನಿಮಿಷದ ಒಳಗಾಗಿ ನೇತ್ರ ಸಂಗ್ರಹ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಡಿಎಸ್ಬಿ ನಿರೀಕ್ಷಕರಾದ ಮೇದಪ್ಪ ಉಪಸ್ಥಿತರಿದ್ದರು. ಶಶಿಧರ್ ಪ್ರಾರ್ಥಿಸಿ, ಗುರುಪ್ರಸಾದ್ ಸ್ವಾಗತಿಸಿದರು. ಫಾರುಕ್ ನಿರೂಪಿಸಿ ವಂದಿಸಿದರು. ಶಿಬಿರದಲ್ಲಿ ೮೨ ಮಂದಿ ರಕ್ತದಾನ ಮಾಡಿದರು. ೫೨ ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಸಿಕೊಂಡರು.