ಮಡಿಕೇರಿ, ಅ. ೪: ಜೀವಂತ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಸಿ.ಐ.ಡಿ. ಪೊಲೀಸ್ ಅರಣ್ಯ ಘಟಕ ಬಂಧಿಸಿದೆ.

ಮೂಲತಃ ಚಾಮರಾಜನಗರದ ನಾಗೇಂದ್ರ ಬಂಧಿತ ಆರೋಪಿಯಾಗಿದ್ದು, ಆಮೆಯನ್ನು ಸಂರಕ್ಷಿಸಲಾಗಿದೆ. ಮಡಿಕೇರಿ ನಗರದ ಹೊರವಲಯದ ಕನ್ನಂಡ ಪಡೆಬೀರ ವೃತ್ತದ ಬಳಿಯ ಬಸ್ ತಂಗುದಾಣದಲ್ಲಿ ನಕ್ಷತ್ರ ಆಮೆಯನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ.

ಸಿಐಡಿ ಅರಣ್ಯ ಘಟಕದ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ನಿರ್ದೇಶನ, ಮಡಿಕೇರಿ ವಿಭಾಗದ ಅಧೀಕ್ಷಕ ಕಾಶಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕಿ ಸಿ.ಯು. ಸವಿ, ಮುಖ್ಯಪೇದೆಗಳಾದ ಶೇಖರ್, ರಾಘವೇಂದ್ರ, ಯೋಗೇಶ್, ಉಮೇಶ್, ಮೋಹನ್ ಪೇದೆಗಳಾದ ಸ್ವಾಮಿ, ಮಂಜುನಾಥ್ ಇದ್ದರು.