ಮಡಿಕೇರಿ, ಅ. ೩ : ಮಡಿಕೇರಿ ನಗರಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೊಳಿಸದ ಹಾಗೂ ಕಳಪೆ ಕಾಮಗಾರಿಗಳಿಗೆ ಕಾರಣವಾಗಿರುವ ನಗರಸಭೆಯ ವಿರುದ್ಧ ಪ್ರತಿಭಟನಾ ಮೆರವಣಿಗೆ ಕೈಗೊಳ್ಳಲಾಯಿತು. ಕೊಡಗು ರಕ್ಷಣ ವೇದಿಕೆ, ಆಟೋ ಚಾಲಕರ ಸಂಘ, ಖಾಸಗಿ ಬಸ್ ಚಾಲಕರ ಸಂಘ, ಲಾರಿ ಮಾಲೀಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಟೆಂಪೋ ಮಾಲೀಕರ ಸಂಘ ಸೇರಿದಂತೆ ಸಾರ್ವಜನಿಕರಿಂದ ನಗರದ ಗಾಂಧಿ ಮೈದಾನದಿಂದ ಚೌಕಿಯವರೆಗೆ ನಂತರ ಹಿಂತಿರುಗಿ ನಗರಸಭೆಯ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಯಿತು.
ಪ್ರತಿಭಟನಾಕಾರರು ನಗರಸಭೆಯ ಪೌರಾಯುಕ್ತರ ವಿರುದ್ಧ, ಸದಸ್ಯರ ವಿರುದ್ಧ ಹಾಗೂ ಕಳಪೆ ಕಾಮಗಾರಿ ಕೈಗೊಳ್ಳುವ ಕೆಲ ಗುತ್ತಿಗಾರರ ವಿರುದ್ಧ ದಿಕ್ಕಾರ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು. `ಗುಂಡಿ ಮುಚ್ಚಿ ಪ್ರಾಣ ಉಳಿಸಿ’, `ರೋಡು ತುಂಬಾ ಗುಂಡಿ, ಓಡಿಸ್ಲಿಕೆ ಆಗಲ್ಲ ಬಂಡಿ' ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ರಸ್ತೆ ಅವ್ಯವಸ್ಥೆ ಬಗ್ಗೆ ಅಸಮಾಧಾನವನ್ನು ಹೊರಹಾಕಿದರು.
ಪ್ರತಿಭಟನಾಕಾರರಲ್ಲಿ ಇಬ್ಬರು ತಮ್ಮ ಕೈಗಳಿಗೆ ಪ್ಲಾಸ್ಟರ್ ಹಾಕಿ, `ತಹಶೀಲ್ದಾರ್ ಕಚೇರಿ ಎದುರು ಬಿದ್ದೆ', `ಗೌಳಿಬೀದಿಯಲ್ಲಿ ಗುಂಡಿಗೆ ಬಿದ್ದೆ' ಎಂಬ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆಯಲ್ಲಿ ವಿಭಿನ್ನವಾಗಿ ಭಾಗಿಯಾಗಿದ್ದರು.
ಒಂದು ವಾರದೊಳಗೆ ರಸ್ತೆ ಸರಿಪಡಿಸದಿದ್ದರೆ ಮಡಿಕೇರಿ ಬಂದ್ ಮಾಡುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದರು.
ಪ್ರತಿಭಟನೆ ವೇಳೆ ನಗರ ಪೊಲೀಸ್ ಠಾಣಾಧಿಕಾರಿ ರಾಧಾ, ಸಹಾಯಕ ಠಾಣಾಧಿಕಾರಿ ಮಹೇಶ್ ಹಾಗೂ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು. ನಗರ ಟ್ರಾಫಿಕ್ ಸಹಾಯಕ ಠಾಣಾಧಿಕಾರಿ ನಂದ ಅವರು ಮೆರವಣಿಗೆ ಸಂದರ್ಭ ಟ್ರಾಫಿಕ್ ನಿರ್ವಹಣೆ ಮಾಡಿದರು.