ಗೋಣಿಕೊಪ್ಪಲು, ಅ. ೩: ನಗರದ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳಲ್ಲಿ ಕಾರ್ಮಿಕರು ಇದ್ದರೂ ಇಲ್ಲದಿದ್ದರೂ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ಗೋಣಿಕೊಪ್ಪ ಸ್ಥಾನೀಯ ಚೇಂಬರ್‌ನ ಅಧ್ಯಕ್ಷರಾದ ಕಡೆಮಾಡ ಸುನಿಲ್ ಮಾದಪ್ಪ ಕರೆ ನೀಡಿದರು.

ಗೋಣಿಕೊಪ್ಪಲುವಿನ ಹರಿಶ್ಚಂದ್ರಪುರದ ಟ್ರೇಡರ್ಸ್ ಚಾರಿಟೇಬಲ್ ಟ್ರಸ್ಟ್ ಕಟ್ಟಡ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಗೋಣಿಕೊಪ್ಪ ನಗರದ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರದ ಸುತ್ತೋಲೆಯಂತೆ ಪ್ರತಿ ವರ್ತಕರು ತಮ್ಮ ತಮ್ಮ ಅಂಗಡಿ ಮಳಿಗೆಯ ವಿವರವನ್ನು ಸಂಬAಧಿಸಿದ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ.

ಅಲ್ಲದೇ ಮಳಿಗೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ವಿವರ ಕೂಡ ಇಲಾಖೆಗೆ ಮಾಹಿತಿ ಒದಗಿಸಬೇಕು, ಅಗತ್ಯ ಸಲಹೆ ಬೇಕಾದಲ್ಲಿ ಗೋಣಿಕೊಪ್ಪ ಚೇಂಬರ್ ಪದಾರ್ಥಗಳನ್ನು ಭೇಟಿ ಮಾಡಿ ಮಾಹಿತಿ ಪಡೆಯಲು ಸಲಹೆ ನೀಡಿದರು. ಕಾರ್ಮಿಕರ ಹಿತವನ್ನು ಕಾಪಾಡುವ ಸಲುವಾಗಿ ಅಂಗಡಿ ಮಾಲೀಕರು ತಮ್ಮ ಕಾರ್ಮಿಕರಿಗೆ ಇ - ಶ್ರಮ್ ಯೋಜನೆಯ ಕಾರ್ಡ್ ಮಾಡಿಸಬೇಕು. ಇದರಿಂದ ಕೇಂದ್ರ ಸರ್ಕಾರದ ಯೋಜನೆಯ ಫಲ ಪಡೆಯಲು ಅನುಕೂಲ ಕಲ್ಪಿಸಿದಂತಾಗುತ್ತದೆ.

ಕಾರ್ಮಿಕ ಇಲಾಖೆಯ ಅಧಿಕಾರಿಗಳು ಅಂಗಡಿ ಮಳಿಗೆಗಳಿಗೆ ಭೇಟಿ ನೀಡುವ ಸಂದರ್ಭ ಇಲಾಖೆಯ ನೋಂದಣಿ ಬಗ್ಗೆ ಮಾಹಿತಿ ಬಯಸಲಿದ್ದಾರೆ. ಒಂದು ವೇಳೆ ನೋಂದಣಿ ಇಲ್ಲದಿದ್ದಾಗ ದಂಡ ವಿಧಿಸುವ ನಿಯಮವು ಕೂಡಾ ಜಾರಿ ಇರುವುದರಿಂದ ಇದರಿಂದ ತಪ್ಪಿಸಿಕೊಳ್ಳಲು ತಮ್ಮ ಮಳಿಗೆಯನ್ನು ನೋಂದಣಿ ಮಾಡುವುದು ಉತ್ತಮ ಎಂದರು. ಈಗಾಗಲೇ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಚೇಂಬರ್ ಪದಾಧಿಕಾರಿಗಳನ್ನು ಕುರಿತು ಸಭೆ ನಡೆಸಿ ವಿವರ ಮಾಹಿತಿ ಒದಗಿಸಿದ್ದಾರೆ ಎಂದರು.

ಸಭೆಯಲ್ಲಿ ಚೇಂಬರ್ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್ ಮಾತನಾಡಿದರು. ವೇದಿಕೆಯಲ್ಲಿ ಚೇಂಬರ್ ಆಫ್ ಕಾಮರ್ಸ್ನ ಮಾಜಿ ಜಿಲ್ಲಾ ಅಧ್ಯಕ್ಷ ಬಿ.ಎನ್. ಪ್ರಕಾಶ್, ಹಿರಿಯ ವರ್ತಕರಾದ ಅಜಿತ್ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಗಣೇಶ್ ರೈ, ಖಜಾಂಚಿ ಮನೋಹರ್ ಉಪಸ್ಥಿತರಿದ್ದರು. ಚೇಂಬರ್‌ನ ನಿರ್ದೇಶಕಿ ಸುಮಿ ಸುಬ್ಬಯ್ಯ ಪ್ರಾರ್ಥಿಸಿ ಉಪಾಧ್ಯಕ್ಷರಾದ ಪ್ರಭಾಕರ್ ನೆಲ್ಲಿತ್ತಾಯ ಸ್ವಾಗತಿಸಿ, ವಂದಿಸಿದರು. ಚೇಂಬರ್‌ನ ನಿರ್ದೇಶಕರು, ಪದಾಧಿಕಾರಿಗಳು ನಗರದ ಹಿರಿಯ ವರ್ತಕರು ಸಭೆಯಲ್ಲಿ ಭಾಗವಹಿಸಿದ್ದರು.