ಗೋಣಿಕೊಪ್ಪ ವರದಿ, ಅ. ೪: ಸಮಾಜ ಸುಧಾರಕರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕ ಅಬ್ದುಲ್ ರೆಹಮನ್ ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್ ಗೋಣಿಕೊಪ್ಪ ಸ್ಥಾನಿಕ ಸಮಿತಿ ವತಿಯಿಂದ ಗೋಣಿಕೊಪ್ಪ ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಆಯೋಜಿಸಿದ್ದ ಯೋಗೇಶ್ ಮಾಸ್ಟರ್ ಬರೆದ ‘ನನ್ನ ಅರಿವಿನ ಪ್ರವಾದಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದಲ್ಲಿ ಸಾಕಷ್ಟು ಸಮಾಜ ಸುಧಾರಕರನ್ನು ಕಂಡಿದ್ದೇವೆ. ಗೌತಮ ಬುದ್ಧ, ಶಂಕರಚಾರ್ಯ, ಪ್ರವಾದಿ ಮುಹಮ್ಮದ್ ಅವರಂತಹ ಸಂದೇಶಗಳು ಜೀವನಕ್ಕೆ ಬೇಕಿದೆ. ಪ್ರವಾದಿ ಮುಹಮ್ಮದ್ ಅವರ ಸಂದೇಶ ಕುರಿತು ಅಭಿಯಾನ ನಡೆಸಲಾಗುತ್ತಿದೆ. ಪುಸ್ತಕ ಬಿಡುಗಡೆ, ವಿಚಾರಗೋಷ್ಠಿ, ಸಮಾವೇಷ, ಪ್ರಬಂಧ ಸ್ಪರ್ಧೆ, ರಕ್ತದಾನ ಶಿಬಿರ, ಸ್ವಚ್ಚತೆ, ಆಸ್ಪತ್ರೆ, ಅನಾಥಾಲಯ, ವೃದ್ಧಾಶ್ರಮ ಭೇಟಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲ ಸಮುದಾಯಗಳನ್ನು ಒಟ್ಟುಗೂಡಿಸುವ ಅಚರಣೆ ನಡೆಯುತ್ತಿದೆ. ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್ ಎಂಬ ಧ್ಯೇಯವಾಕ್ಯದಡೀ ಅಭಿಯಾನ ನಡೆಸಲಾಗುತ್ತಿದೆ. ಪ್ರವಾದಿಯವರ ಮೇಲಿನ ತಪ್ಪುಕಲ್ಪನೆ, ಪೂರ್ವಾಗೃಹಗಳು, ದ್ವೇಷದ ವಾತಾವರಣ ನಿವಾರಿಸಿ ಶಾಂತಿ ಸಹಬಾಳ್ವೆ ಉದ್ದೇಶ ಎಂದರು.

ಈ ಸಂದರ್ಭ ಗೋಣಿಕೊಪ್ಪ ಸ್ಥಾನಿಕ ಸಂಚಾಲಕ ತನ್ವಿರ್ ಅಹಮ್ಮದ್, ಉಪಾಧ್ಯಕ್ಷ ಪಿ.ಎಂ. ಮೊಹಮ್ಮದ್, ಹಿಜಾಯತ್ ಸೆಂಟರ್ ಉಪಾಧ್ಯಕ್ಷ ಸಮೀರ್, ಕಾರ್ಯದರ್ಶಿ ತಂಜಿಲ್, ಸದಸ್ಯರಾದ ಫೈಜಲ್, ಅಬು, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಇದ್ದರು.