ಕುಶಾಲನಗರ, ಅ. ೩: ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಎರಡು ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಶಾಲನಗರ ತಾಲೂಕಿನ ಗೊಂದಿಬಸವನಹಳ್ಳಿ ಗ್ರಾಮದ ನಿವಾಸಿ ಸುಬ್ರಮಣ್ಯ (೨೬) ಎಂಬಾತ ಬಂಧಿತ ಆರೋಪಿ.
೨೦೧೮ ರಲ್ಲಿ ಕುಶಾಲನಗರ ಜಾತ್ರಾ ಮೈದಾನದಲ್ಲಿ ಹಾಗೂ ಇತ್ತೀಚೆಗೆ ಕುಶಾಲನಗರ ಸರ್ಕಾರಿ ಆಸ್ಪತ್ರೆ ಬಳಿಯಿಂದ ಬೆಲೆಬಾಳುವ ದ್ವಿಚಕ್ರ ವಾಹನ ಕಳವಾಗಿತ್ತು.
ಪಟ್ಟಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಕುಶಾಲನಗರ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ, ಪೊಲೀಸ್ ರಾಜೇಶ್ ಕೋಟ್ಯಾನ್ ಮಾರ್ಗದರ್ಶನದಲ್ಲಿ ಕುಶಾಲನಗರ ಠಾಣಾಧಿಕಾರಿ ಹೆಚ್ ವಿ ಚಂದ್ರಶೇಖರ್ ಮತ್ತು ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಹೆಚ್.ಟಿ. ಗೀತಾ ನೇತೃತ್ವದಲ್ಲಿ ಪೊಲೀಸರ ತಂಡ ಕಳ್ಳನ ಪತ್ತೆಗಾಗಿ ಕಾರ್ಯಾಚರಣೆ ನಡೆಸಿ ಎರಡು ಬೈಕ್ಗಳೊಂದಿಗೆ ಆರೋಪಿಯನ್ನು ಪತ್ತೆ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಎಎಸ್ಐ ವೆಂಕಟೇಶ್, ಸಿಬ್ಬಂದಿಗಳಾದ ಸಂದೀಪ್ ರೈ, ರಂಜಿತ್, ಪ್ರಕಾಶ್, ಪ್ರವೀಣ್ ಪಾಲ್ಗೊಂಡಿದ್ದರು.