ನಾಪೋಕ್ಲು, ಅ. ೩ : ಬೆಟ್ಟಗೇರಿ ಸಮೀಪದ ಬಕ್ಕದಲ್ಲಿರುವ ಸ್ವಸಹಾಯ, ಸ್ತಿçÃಶಕ್ತಿ, ಗಜಾನನ ಭಕ್ತ ಮಂಡಳಿ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ೧೭ನೇ ವರ್ಷದ ಕೈಲ್ ಮುಹೂರ್ತ ಕ್ರೀಡಾಕೂಟ ಅದ್ಧೂರಿಯಾಗಿ ನಡೆಯಿತು. ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಳಿಯಂಡ ಕಮಲಾ ಉತ್ತಯ್ಯ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರ್ ಸೂದನ ಮೋಹನ್ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಎಲ್ಕೆಜಿ, ಯುಕೆಜಿ ಮಕ್ಕಳಿಗೆ ಕಪ್ಪೆ ಹಾರುವುದು, ಮ್ಯಾರಥಾನ್, ೧೦೦ ಮೀಟರ್ ಓಟ, ಮೂರು ಕಾಲಿನ ಓಟ, ಗೋಣಿಚೀಲದ ಓಟ, ಮಹಿಳೆಯರಿಗೆ ಏರ್ಗನ್ ಶೂಟಿಂಗ್, ನೀರು ಚೆಂಬಿನ ಓಟ, ನಿಂಬೆ ಹಣ್ಣು ಚಮಚದ ಓಟ, ಬಕೆಟಿಗೆ ಚೆಂಡು ಹಾಕುವುದು, ಹಗ್ಗಜಗ್ಗಾಟ, ವಾದ್ಯ ಕುಣಿತ ಸೇರಿದಂತೆ ಕಿರಿಯರಿಂದ ವಯಸ್ಕರವರೆಗೆ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆಟೋಟ ಸ್ಪರ್ಧೆಗಳು ನಡೆದವು.
ಸಭಾ ಕಾರ್ಯಕ್ರಮ : ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮವನ್ನು ಕ್ರೀಡಾ ಸಮಿತಿ ಅಧ್ಯಕ್ಷ ಬೈತಡ್ಕ ದೇವಯ್ಯ ಅವರು ಉದ್ಘಾಟಿಸಿದರು. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಸೇರಿದಂತೆ ಎಲ್ಲಾ ಸಂಘಗಳ ಅಧ್ಯಕ್ಷರುಗಳು, ಆಡಳಿತ ಮಂಡಳಿ ಮತ್ತು ಸದಸ್ಯರು ಭಾಗವಹಿಸಿದ್ದರು.
ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ತಹಶೀಲ್ದಾರ್ ಸೂದನ ಮೋಹನ್ ಕ್ರೀಡಾಕೂಟಗಳು ಪರಸ್ಪರ ಬಾಂಧವ್ಯವನ್ನು ಬೆಸೆಯುತ್ತವೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ಹೊರಬಂದು ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವು ದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಿವೃತ್ತ ಹಾನರರಿ ಕ್ಯಾಪ್ಟನ್ ಬಾಡನ ಲೋಕೇಶ್ ಮಾತನಾಡಿ, ಇತ್ತೀಚೆಗೆ ಜನರು ಹಳ್ಳಿಯಿಂದ ಪಟ್ಟಣದೆಡೆಗೆ ಮುಖ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಹಳ್ಳಿಯ ಸೊಗಡು ಕೃಷಿ ಚಟುವಟಿಕೆ ಕ್ರೀಡಾಕೂಟಗಳಿಂದ ಸಿಗುವ ಆನಂದ ಪಟ್ಟಣದಲ್ಲಿ ಸಿಗುವುದು ಅಸಾಧ್ಯ. ಆದ್ದರಿಂದ ಇಲ್ಲಿಯ ಪರಿಸರವನ್ನು ಆಸ್ವಾದಿಸುತ್ತ ಆರೋಗ್ಯಕರ ಜೀವನವನ್ನು ನಡೆಸುವ ಮೂಲಕ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಗೊಂಡು ದೇಶ ಸೇವೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಪುಟ್ಟ ಹಳ್ಳಿಯಲ್ಲಿ ಕೇವಲ ಸ್ವಸಹಾಯ ಸಂಘಗಳು ಸಾರ್ವಜನಿಕರ ಸಹಯೋಗದಲ್ಲಿ ಸತತ ೧೭ ವರ್ಷಗಳಿಂದ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಪ್ರಶಂಸನೀಯ ಎಂದು ಶ್ಲಾಘಿಸಿದರು.
ಕಾರ್ಯದರ್ಶಿ ಹೊಸೋಕ್ಲು ಮೊಣ್ಣಪ್ಪ ಪ್ರಾಸ್ತಾವಿಕ ಮಾತನಾಡಿದರು. ಕ್ರೀಡಾ ಸಮಿತಿ ಅಧ್ಯಕ್ಷ ಬೈತಡ್ಕ ದೇವಯ್ಯ ಹಾಗೂ ನ್ಯಾಯಾಧೀಶರಾದ ನೆಯ್ಯಣಿ ದಿನೇಶ್ ಅವರ ಪತ್ನಿ ಸುಶ್ಮಾ ಮಾತನಾಡಿದರು.
ವೃಷ್ಟಿ ಮತ್ತು ಪಂಚಮಿ ಪ್ರಾರ್ಥಿಸಿ, ನೆಯ್ಯಣಿ ಹೇಮಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.