ಕಡಂಗ, ಅ. ೪: ನರಿಯಂದಡ ವಲಯ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರನ್ನು ಗ್ರಾಮಸ್ಥರು ಸ್ವಾಗತಿಸಿ, ನರಿಯಂದಡ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು.
ಕಡಂಗ ಶಾದಿ ಮಹಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಯಂದಡ ವಲಯ ಅಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎ.ಎಸ್. ಪೊನ್ನಣ್ಣ ಮುಂದೆ ಕೇಂದ್ರದಲ್ಲಿ ಜಾತ್ಯಾತೀತ ಪಕ್ಷಗಳು ಆಡಳಿತ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ಸಿನ ಕಾರ್ಯಕರ್ತರು ಸ್ಥಳೀಯ ಮಟ್ಟದಿಂದಲೇ ಎಚ್ಚೆತ್ತುಕೊಳ್ಳಬೇಕೆಂದು ನುಡಿದರು. ಶಾಸಕ ಎ.ಎಸ್. ಪೊನ್ನಣ್ಣ ಅವರೊಂದಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಾದ ಹನೀಫ ಚೋಕಂಡಳ್ಳಿ ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಗ್ರಾ.ಪಂ. ಸದಸ್ಯ ಮಮ್ಮದ್, ಸುಬೈರ್, ಡಿಸಿಸಿ ಸದಸ್ಯ ಮಣಿ ಅಯ್ಯಮ್ಮ, ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಅಬ್ದುರಹ್ಮಾನ್, ಮುಹ್ಯದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ಲ,ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು.ಶಾಫಿ, ಬಾನಂಡ ಪೃತ್ಯು ಮತ್ತು ಪಂಚಾಯತ್ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರಿಂದ ಶಾಸಕರು ಅಹವಾಲು ಸ್ವೀಕರಿಸಿದರು.