ಕಣಿವೆ, ಅ. ೨: ವಾಹನ ಹಾಗೂ ಜನ ದಟ್ಟಣೆಯಿಂದಾಗಿ ದಿನೇ ದಿನೇ ಬೆಳೆಯುತ್ತಿರುವ ತಾಲೂಕು ಕೇಂದ್ರ ಕುಶಾಲನಗರ ಪಟ್ಟಣದಲ್ಲಿ ನಿರ್ಮಿಸಲು ಮುಂದಾಗಿದ್ದ ಸಂಚಾರಿ ಪೊಲೀಸ್ ಠಾಣೆ ಕಾಮಗಾರಿಯನ್ನು ಸ್ಥಗಿತ ಗೊಳಿಸಲಾಗಿದೆ.
ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ೨೬ ಸೆಂಟು ಜಾಗದಲ್ಲಿ ರೂ. ೩ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಸಂಚಾರಿ ಠಾಣೆಯ ಕಾಮಗಾರಿ ಶೇ.೨೦ ಭಾಗ ನಡೆದಿತ್ತು. ಇದಕ್ಕಾಗಿ ಈಗಾಗಲೇ ೩೦ ಲಕ್ಷಕ್ಕೂ ಅಧಿಕ ಹಣ ವ್ಯಯ ಮಾಡಲಾಗಿದ್ದು ಅಡಿಪಾಯ ಹಾಗೂ ಪಿಲ್ಲರ್ಗಳನ್ನು ನಿರ್ಮಿಸಲಾಗಿತ್ತು.
ಜನವಸತಿಗೆ ತೊಂದರೆ
ಸಂಚಾರಿ ಠಾಣೆ ನಿರ್ಮಾಣ ದಿಂದ ಜನವಸತಿ ಪ್ರದೇಶಕ್ಕೆ ಅನಗತ್ಯ ಕಿರಿಕಿರಿಯಾಗುತ್ತದೆ. ಅಪಘಾತವಾಗುವ ನಜ್ಜುಗುಜ್ಜಾದ ಮತ್ತು ರಕ್ತಸಿಕ್ತವಾದ ವಾಹನಗಳನ್ನು ತಂದು ಇಲ್ಲಿ ನಿಲ್ಲಿಸಲಾಗುತ್ತದೆ. ನಾವು ನಿತ್ಯವೂ ಬೆಳ್ಳಂಬೆಳಗ್ಗೆ ಎದ್ದು ಇಂತಹ ವಾಹನಗಳನ್ನು ನೋಡಬೇಕೇ ಎಂಬುದು ಕೂಡ ಸ್ಥಳೀಯರ ವಿರೋಧಕ್ಕೆ ಕಾರಣವಾಗಿತ್ತು.
ಪುರಸಭೆಯಿಂದ ಜಾಗ ನೀಡಿಕೆ
ಸಂಚಾರ ಠಾಣೆ ನಿರ್ಮಾಣಕ್ಕಾಗಿ ಪುರಸಭೆ ಅಧೀನದಲ್ಲಿನ ಜಾಗಕ್ಕೆ ಸರ್ಕಾರದ ಭೂಮಿ ಖರೀದಿ ದರದ ಅನ್ವಯ ಪೊಲೀಸ್ ಇಲಾಖೆ ರೂ. ೨೩ ಲಕ್ಷ ಹಣವನ್ನು ಕುಶಾಲನಗರ ಪುರಸಭೆಗೆ ಪಾವತಿಸಿ ಜಾಗವನ್ನು ಪಡೆದುಕೊಂಡಿತ್ತು. ಬಳಿಕ ಟೆಂಡರ್ ಪ್ರಕ್ರಿಯೆಯನ್ನು ತರಾತುರಿಯಲ್ಲಿ ಮುಗಿಸಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಕುಶಾಲನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ ಗುಂಡೂರಾವ್ ಅವರ ನಿವಾಸ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಕಾಯ್ದಿರಿಸಿದ ವಸತಿ ನಿವೇಶನ ಉದ್ದೇಶಿತ ಸಂಚಾರ ಠಾಣೆಯ ಕಟ್ಟಡದ ಮುಂಬದಿಯೇ ಇದ್ದುದರಿಂದ ಸಹಜವಾಗಿಯೇ ಗುಂಡೂರಾವ್ ಬಡಾವಣೆ ನಿವಾಸಿಗಳು ಇವರಿಬ್ಬರ ಮೇಲೆ ಕಾಮಗಾರಿ ಸ್ಥಗಿತಕ್ಕೆ ಒತ್ತಡ ತಂದರು. ಬಳಿಕ ಮಂಜುನಾಥ ಗುಂಡೂರಾವ್, ಉದ್ದೇಶಿತ ಕಟ್ಟಡಕ್ಕೆ ಕೂಡದಿಂದ ಅನುಮೋದನೆ ಪಡೆಯದ ನಿರ್ಮಾಣ ಕಾಮಗಾರಿಗೆ ತಡೆ ತಂದರು. ಬಳಿಕ ಈ ವಿಚಾರವನ್ನು ಸರ್ಕಾರದ ಮಟ್ಟದವರೆಗೂ ಕೊಂಡೊಯ್ದು ಈ ಸಂಚಾರ ಠಾಣೆ ಕಟ್ಟಡ ಕಾಮಗಾರಿಗೆ ಶಾಶ್ವತವಾಗಿ ತಡೆ ಒಡ್ಡಲಾಗಿದೆ.
ಸಂಚಾರ ಠಾಣೆಗೆ ಹಾಲಿ ಇರುವ ಕೂಡ್ಲೂರು ಕೈಗಾರಿಕಾ ಬಡಾವಣೆಯ ರೇಷ್ಮೆ ಇಲಾಖೆಯ ಜಾಗವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲು ಸಚಿವ ಕೆ.ವೆಂಕಟೇಶ್ ಅವರ ಬಳಿಯೂ ವಿನಂತಿಸಲಾಗಿದೆ. ಅದಕ್ಕೆ ಅವರು ಮೌಖಿಕವಾಗಿ ಸಮ್ಮತಿಸಿದ್ದಾರೆ ಎಂದು ಮಂಜುನಾಥ ಗುಂಡೂರಾವ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಕೂಡಾ ಕಚೇರಿಗೆ ಪರಿವರ್ತನೆ
ಈಗಾಗಲೇ ಚಾಲನೆಗೊಂಡಿದ್ದ ಕಾಮಗಾರಿಯನ್ನು ಕುಶಾಲನಗರ ಯೋಜನಾ
(ಮೊದಲ ಪುಟದಿಂದ) ಪ್ರಾಧಿಕಾರದ ಕಚೇರಿಗಾಗಿ ಬಳಕೆ ಮಾಡಿಕೊಳ್ಳುವ ಸಂಬAಧ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುತ್ತದೆ ಎಂದು ಮಂಜುನಾಥ್ ಗುಂಡೂರಾವ್ ತಿಳಿಸಿದರು.
ಜಿದ್ದಿಗೆ ಬಿದ್ದ ಯೋಜನೆ ಕೊನೆಗೂ ರದ್ದು
ಈ ಹಿಂದೆ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವಧಿಯಲ್ಲಿ ಇದ್ದ ಕುಶಾಲನಗರದ ಪೋಲೀಸ್ ಅಧಿಕಾರಿಗಳು, ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ಕಾಂಗ್ರೆಸ್ಸಿಗರಿಗೆ ಸಡ್ಡು ಹೊಡೆದು ಜಿದ್ದಿಗೆ ಬಿದ್ದವರಂತೆ ಏಕಾಏಕಿ ಕಾಮಗಾರಿಗೆ ಮುಂದಾಗಿದ್ದರು. ಇದೀಗ ತಮ್ಮದೇ ಸರ್ಕಾರ, ತಮ್ಮವರೇ ಶಾಸಕರು ಇರುವುದರಿಂದ ಹಿಂದಿನ ಬಿಜೆಪಿ ಅವಧಿಯಲ್ಲಿ ಕೈಗೊಂಡಿದ್ದ ಅವೈಜ್ಞಾನಿಕ ಯೋಜನಾ ಕಾಮಗಾರಿಯನ್ನು ಸ್ಥಗಿತಗೊಳಿಸಿರುವುದು ಬಡಾವಣೆಯ ನಿವಾಸಿಗಳಿಗೆ ಒಂದಷ್ಟು ಸಮಾಧಾನ ತಂದಿದೆ.