ಗೋಣಿಕೊಪ್ಪಲು, ಅ. ೨: ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ತಮ್ಮ ಆರೋಗ್ಯವನ್ನು ವೃದ್ಧಿಗೊಳಿಸಲು ಗ್ರಾಮ ಪಂಚಾಯಿತಿಯು ಅಳವಡಿಸಿರುವ ಜಿಮ್ ಕೇಂದ್ರದಲ್ಲಿನ ಸಲಕರಣೆಗಳನ್ನು ಬಳಸಿಕೊಂಡು ಇದರ ಪ್ರಯೋಜನ ಪಡೆಯುವಂತಾಗಬೇಕೆAದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಗ್ರಾಮಸ್ಥರಿಗೆ ಕರೆ ನೀಡಿದರು.
ಬಿ.ಶೆಟ್ಟಿಗೇರಿ ಗ್ರಾಮ ಪಂಚಾ ಯಿತಿಯ ಕೊಂಗಣ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಜಿಮ್ ಕೇಂದ್ರವನ್ನು ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಇವರು, ನಗರ ಪ್ರದೇಶದಲ್ಲಿನ ಯುವಕ ಯುವತಿಯರಿಗೆ ಮಾತ್ರ ಇಂತಹ ಯೋಜನೆಯ ಪ್ರಯೋಜನ ದೊರೆಯುತ್ತಿತ್ತು. ಇದೀಗ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿಶೇಷ ಆಸಕ್ತಿಯಿಂದ ಗ್ರಾಮೀಣ ಪ್ರದೇಶ ದಲ್ಲಿಯೇ ಜಿಮ್ ಕೇಂದ್ರ ಆರಂಭ ವಾಗಿರುವುದು ಶ್ಲಾಘನೀಯ.ಅಧ್ಯಕ್ಷರ ಇಚ್ಚಾಶಕ್ತಿಯಿಂದ ಗ್ರಾಮಸ್ಥರಿಗೆ ಇದರ ಪ್ರಯೋಜನ ದೊರೆಯಲಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಉಮೇಶ್ ಕೇಚಮಯ್ಯ ಮಾತನಾಡಿ, ಗ್ರಾಮ ವಿಕಾಸ ಯೋಜನೆಯಡಿ ೨೦೧೪ರಲ್ಲಿ ಕೊಡಗು ಜಿಲ್ಲೆಯ ಮೂರು ಗ್ರಾಮ ಪಂಚಾಯಿತಿಗಳಿಗೆ ಗ್ರಾಮ ವಿಕಾಸದಡಿಯಲ್ಲಿ ೭೫ ಲಕ್ಷದ ಅನುದಾನ ಮಂಜೂರಾಗಿತ್ತು. ಇದರಲ್ಲಿ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯು ಗ್ರಾಮೀಣ ಮಟ್ಟದಲ್ಲಿ ಆಯ್ಕೆಯಾಗಿತ್ತು. ಆಗಿನ ಡಿಸಿಸಿ ಅಧ್ಯಕ್ಷರಾಗಿದ್ದ ಬಿದ್ದಾಟಂಡ ಪ್ರದೀಪ್ ಹಾಗೂ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕಡೇಮಾಡ ಅಶೋಕ್ ಚಿಟ್ಟಿಯಪ್ಪ, ಉಮೇಶ್ ಕೇಚಮಯ್ಯನವರ ಪ್ರಯತ್ನದಿಂದ ಆಗಿನ ಸಂಸದರಾದ ಹೆಚ್.ವಿಶ್ವನಾಥ್ ಅವರನ್ನು ಸಂಪರ್ಕಿಸಿ ಅನುದಾನ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದೆವು. ಈ ಅನುದಾನವು ಕುಟ್ಟಂದಿ ಗ್ರಾಮಕ್ಕೆ ಮಾತ್ರ ಸೀಮಿತವಾಗಿತ್ತು. ನಂತರದ ದಿನಗಳಲ್ಲಿ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯಲ್ಲಿ ಸಭೆ ಸೇರಿ ಇದರ ಪ್ರಯೋಜನ ಬಿ.ಶೆಟ್ಟಿಗೇರಿಯ ಗ್ರಾಮಸ್ಥರಿಗೂ ಲಭಿಸಬೇಕು ಎಂಬ ನಿರ್ಣಯವನ್ನು ಕೈಗೊಂಡು ಕುಟ್ಟಂದಿಯಲ್ಲಿ ಕಟ್ಟಡ ನಿರ್ಮಿಸಲಾಯಿತು. ಕಳೆದ ೮ ವರ್ಷಗಳಿಂದ ಈ ಯೋಜನೆಯು ನೆನೆಗುದಿಯಲ್ಲಿತ್ತು. ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಇದಕ್ಕೆ ಕಾಯಕಲ್ಪ ನೀಡಿದರು. ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕೊಲ್ಲೀರ ಬೋಪಣ್ಣ ನವರು ಜಿಮ್ ಕೇಂದ್ರಕ್ಕೆ ಬೇಕಾದ ಪರಿಕರಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದರಿಂದ ಇಂದು ಗ್ರಾಮಸ್ಥರಿಗೆ ಇದರ ಪ್ರಯೋಜನ ಲಭಿಸಿದಂತಾಗಿದೆ ಎಂದರು. ಶಾಸಕ ಪೊನ್ನಣ್ಣನವರು ಜಿಮ್ ಕೇಂದ್ರದಲ್ಲಿ ಕೆಲ ಕಾಲ ಅಭ್ಯಾಸ ನಡೆಸಿ, ಗ್ರಾಮಸ್ಥರ ಗಮನ ಸೆಳೆದರು.
ಈ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿಗಳಾದ ಕೆ.ಸಿ.ಅಪ್ಪಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೊಲ್ಲೀರ ಬೋಪಣ್ಣ, ಗ್ರಾ.ಪಂ. ಸದಸ್ಯರುಗಳು ಸೇರಿದಂತೆ ಗ್ರಾಮದ ಪ್ರಮುಖರಾದ ಕಡೇಮಾಡ ಕುಸುಮ ಜೋಯಪ್ಪ, ತೀತಿಮಾಡ ಸದಾ, ಉಪಸ್ಥಿತರಿದ್ದರು.
ಶಾಸಕರೊಂದಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ಕಾಂಗ್ರೆಸ್ ಪಕ್ಷದ ಹಿರಿಯರಾದ ಪೆಮ್ಮಂಡ ಕೆ.ಪೊನ್ನಪ್ಪ, ಮೂಕಳೇರ ಕುಶಾಲಪ್ಪ, ಚೇರಂಡ ಮೋಹನ್, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.