ಗೋಣಿಕೊಪ್ಪಲು, ಅ. ೧: ಇದೊಂದು ದಾರುಣವಾದ ಘಟನೆ... ಅಮಾಯಕ ಮೂಕಪ್ರಾಣಿಗಳು ಗದ್ದೆಯಲ್ಲಿ ಮೇಯಲು ತೆರಳಿದ್ದ ಸಂದರ್ಭ ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಗೊಂಡು ಒಟ್ಟಿಗೆ ಐದು ಜಾನುವಾರುಗಳು ಬಲಿಯಾದ ಘಟನೆ ಪೊನ್ನಂಪೇಟೆ ಸನಿಹದ ಮತ್ತೂರು ಗ್ರಾಮದಲ್ಲಿ ನಡೆದಿದೆ. ಅಲ್ಲಿನ ರೈತರೊಬ್ಬರಿಗೆ ಸೇರಿದ ನಾಲ್ಕು ಹಸು ಹಾಗೂ ಒಂದು ಕರು ಈ ಘಟನೆಯಲ್ಲಿ ಸಾವಿಗೀಡಾಗಿವೆ.

ಒಂದೇ ಸಮನೆ ಸುರಿಯುತ್ತಿರುವ ಮಳೆ ಒಂದೆಡೆಯಾಗಿತ್ತು. ಈ ನಡುವೆ ಮೇಯಲು ಪಾಳು ಬಿದ್ದಿರುವ ಗದ್ದೆಗಳಿಗೆ ತೆರಳಿದ್ದ ಗ್ರಾಮದ ಆಲೇಮಾಡ ನಾಣಯ್ಯ ಅವರಿಗೆ ಸೇರಿದ ಹಸುಗಳು ಹಾಗೂ ಕರು ಸಾವನ್ನಪ್ಪಿದೆ. ಇದೇ ಭತ್ತದ ಗದ್ದೆಯನ್ನು ಉಳುಮೆ ಮಾಡದೆ ಹಾಗೆಯೆ ಹಲವಾರು ಸಮಯದಿಂದಲೂ ಪಾಳು ಬಿಡಲಾಗಿತ್ತು. ಈ ಗದ್ದೆಗೆ ಜಾನುವಾರುಗಳು ಮೇವು ಅರಸಿ ತೆರಳಿದ್ದವು. ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಇವುಗಳು ಒಟ್ಟೊಟ್ಟಿಗೆ ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ಹಸುವಿನ ಮಾಲೀಕರು ಮಧ್ಯಾಹ್ನದ ವೇಳೆ ಹಸುವನ್ನು ನೋಡಲು ಆಗಮಿಸಿದ ವೇಳೆ ಗದ್ದೆಯಲ್ಲಿ ಹಸು ಹಾಗೂ ಕರು ಸಾವನ್ನಪ್ಪಿರುವುದು ತಿಳಿದು ಬಂದಿದೆ. ಗದ್ದೆಯ ಮೇಲ್ಬಾಗದಿಂದ ವಿದ್ಯುತ್ ತಂತಿ ಹಾದುಹೋಗಿತ್ತು. ಕಳೆದೆರಡು ದಿನಗಳಿಂದ ಒಂದೇ ಸಮನೆ ಗಾಳಿ ಹಾಗೂ ಮಳೆ ಈ ಭಾಗದ ಸುತ್ತಮುತ್ತಲಿನಲ್ಲಿ ಸುರಿಯುತ್ತಿದೆ. ತೀವ್ರ ರೀತಿಯ ಗಾಳಿಯಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ. ಸುದ್ದಿ ತಿಳಿದು ಪೊನ್ನಂಪೇಟೆ ಸೆಸ್ಕ್ ಅಧಿಕಾರಿ ಹಾಗೂ ಸಿಬ್ಬಂದಿಗಳು, ಪೊನ್ನಂಪೇಟೆ ಪೋಲಿಸ್ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರು ಮಳೆಯ ನಡುವೆ ಘಟನಾ ಸ್ಥಳಕ್ಕೆ ತೆರಳಿ ವೀಕ್ಷಣೆ ಮಾಡಿದರು. ಇಲಾಖೆಯ ನಿರ್ಲಕ್ಷ್ಯತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತದ ಪರಿಸ್ಥಿತಿಯಲ್ಲಿ ರೈತರು ಜಾನುವಾರುಗಳನ್ನು ಸಾಕುವುದೇ ಅಪರೂಪವಾಗಿದೆ. ಇಂತಹದ್ದರಲ್ಲಿ ಪ್ರೀತಿಯಿಂದ ಸಾಕಿ - ಸಲಹುತ್ತಿದ್ದ ಐದು ಜಾನುವಾರುಗಳು ದುರಂತವಾಗಿ ಸಾವಿಗೀಡಾಗಿರುವುದು ರೈತರಲ್ಲಿ ದುಃಖ ತಂದಿದೆ. ಅಪಾಯಕಾರಿ ಯಂತಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

- ಹೆಚ್.ಕೆ. ಜಗದೀಶ್