ಕುಶಾಲನಗರ, ಅ. ೧: ಶತಮಾನದ ಇತಿಹಾಸದತ್ತ ಸಾಗುತ್ತಿರುವ ಕುಶಾಲನಗರ ಪ್ರವಾಸಿ ಮಂದಿರ ಕಟ್ಟಡ ಇದೀಗ ನೂತನ ದ್ವಾರದ ನಿರ್ಮಾಣದೊಂದಿಗೆ ತನ್ನ ಸೌಂದರ್ಯವನ್ನು ವೃದ್ಧಿಸಿಕೊಳ್ಳುತ್ತಿದೆ.

ಸುಮಾರು ಐದು ಎಕರೆ ಜಾಗದ ವಿಸ್ತೀರ್ಣದಲ್ಲಿ ನೆಲೆ ಕಂಡಿರುವ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಪ್ರವಾಸಿ ಮಂದಿರ ಆಧುನಿಕ ಸ್ಪರ್ಶದೊಂದಿಗೆ ಗಣ್ಯರ, ಸಾರ್ವಜನಿಕರ ಸೇವೆಗೆ ಸಿದ್ಧಗೊಳ್ಳುತ್ತಿದೆ.

ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿರುವ ಕುಶಾಲನಗರ ಪ್ರವಾಸಿ ಮಂದಿರ ಕಟ್ಟಡದ ಸಮೀಪದಲ್ಲಿ ಮೂರು ದಶಕಗಳ ಹಿಂದೆ ಅತಿ ಗಣ್ಯರ ಸಂದರ್ಶನಕ್ಕೆ ಹೆಚ್ಚುವರಿ ಕಟ್ಟಡ ಒಂದು ನಿರ್ಮಾಣಗೊಂಡಿದ್ದು ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿರುವ ಈ ಕಟ್ಟಡ ಮುಖ್ಯ ದ್ವಾರ ಕೇರಳದ ಕೆಂಪುಕಲ್ಲುಗಳ ಆಕರ್ಷಕ ವಿನ್ಯಾಸದೊಂದಿಗೆ ನಿರ್ಮಾಣಗೊಳ್ಳುತ್ತಿದೆ. ಹಳೆಯ ಕಟ್ಟಡದಲ್ಲಿ ನಾಲ್ಕು ಕೊಠಡಿಗಳು ಗಣ್ಯರ ಅತಿಥಿ ಗೃಹದಲ್ಲಿ ಎರಡು ಕೊಠಡಿಗಳು ಲಭ್ಯವಿದೆ.

ಸುಮಾರು ೧೫ ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ಪ್ರಸಕ್ತ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಸಾಗುತ್ತಿದ್ದು, ಪ್ರದೇಶಕ್ಕೆ ಆವರಣ ಗೋಡೆ ಹಾಗೂ ಉದ್ಯಾನವನ ನಿರ್ಮಿಸಲಾಗಿದೆ. ಕೇರಳದ ಇರಿಟ್ಟಿ ಭಾಗದ ಕಾರ್ಮಿಕರು ಇಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದಾರೆ.

ಇಷ್ಟೊಂದು ಇತಿಹಾಸ ಹೊಂದಿರುವ ಪ್ರವಾಸಿ ಮಂದಿರ ಜಾಗದ ದಾಖಲೆ ಎರಡು ತಿಂಗಳ ಹಿಂದೆಯಷ್ಟೇ ಇಲಾಖೆ ಹೆಸರಿಗೆ ನೋಂದಾಯಿಸಲ್ಪಟ್ಟಿದ್ದು, ಈ ಸಂಬAಧ ಇಲಾಖೆಯ ಸಹಾಯಕ ಇಂಜಿನಿಯರ್ ಸೈಜನ್ ಕೆ. ಪೀಟರ್ ಅವರ ಆಸಕ್ತಿಯಿಂದ ಈ ಜಾಗ ಪರರ ಪಾಲಾಗುವುದು ತಪ್ಪಿದಂತಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಸತೀಶ ಕುಮಾರ್ ಅವರ ಮುತುವರ್ಜಿಯಿಂದ ಸರ್ಕಾರಿ ಆಸ್ತಿಯೊಂದು ಉಳಿಯುವಂತಾಗಿದೆ.

ಪ್ರವಾಸಿ ಮಂದಿರ ಆವರಣದ ಒಳಗೆ ಸಾರ್ವಜನಿಕರಿಗೆ ಮುಂಜಾನೆ ವೇಳೆಯಲ್ಲಿ ವಾಯು ವಿಹಾರಕ್ಕೆ ಕೂಡ ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ನೂರಾರು ಗಿಡಮರಗಳ ನಡುವೆ ಹಚ್ಚ ಹಸಿರಾಗಿ ಕಾಣುತ್ತಿರುವ ಸರಕಾರಿ ಪ್ರವಾಸಿ ಮಂದಿರದ ನಿರ್ವಹಣೆಗೆ ಮಾತ್ರ ಸಹಾಯಕರ ಕೊರತೆ ಎದ್ದು ಕಾಣುತ್ತಿದೆ. ದಿನದ ೨೪ ಗಂಟೆಗಳ ಕಾಲ ಒಬ್ಬನೇ ನೌಕರ ಇಡೀ ಸುತ್ತಮುತ್ತಲ ವ್ಯಾಪ್ತಿಯನ್ನು ನಿರ್ವಹಿಸಬೇಕಾಗಿದೆ. ಇದೇ ಆವರಣದಲ್ಲಿ ಕಳೆದ ಹಲವು ವರ್ಷಗಳಿಂದ ಮಳೆ ಮಾಪನ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ಪ್ರಸಕ್ತ ಅದನ್ನು ಕೂಡ ಅತ್ಯಾಧುನಿಕ ತಂತ್ರಜ್ಞಾನದೊAದಿಗೆ ಅಳವಡಿಸಲಾಗಿದೆ.

ಪ್ರವಾಸಿ ಮಂದಿರದ ಪ್ರವೇಶ ದ್ವಾರದಲ್ಲಿ ಮುಖ್ಯ ಗೇಟ್ ಒಂದನ್ನು ಅಳವಡಿಸುವ ಕಾಮಗಾರಿ ಬಾಕಿ ಉಳಿದಿರುವುದಾಗಿ ತಿಳಿಸಿರುವ ಪ್ರವಾಸಿ ಮಂದಿರದ ಉಸ್ತುವಾರಿ ಅಧಿಕಾರಿ ಸೈಜನ್ ಪೀಟರ್ ಪ್ರವಾಸಿ ಮಂದಿರ ಆವರಣದಲ್ಲಿ ಉತ್ತಮ ಪರಿಸರ ಹಾಗೂ ಸ್ವಚ್ಛತೆಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

- ಚಂದ್ರಮೋಹನ್