ಮಡಿಕೇರಿ, ಅ. ೧: ಜೀವನದಿ ಕಾವೇರಿಯ ಉಗಮ ಸ್ಥಾನವಾದ ಭಾಗಮಂಡಲ-ತಲಕಾವೇರಿ ಪಶ್ಚಿಮ ಘಟ್ಟದ ಗ್ಲಾಸ್ಬ್ರಿಡ್ಜ್ ನಿರ್ಮಾಣಕ್ಕೆ ತಡೆಯಾಡಿರುವುದನ್ನು ಅಖಿಲ ಕೊಡವ ಸಮಾಜ ಸ್ವಾಗತಿಸಿದ್ದು, ಭಾಗಮಂಡಲ-ತಲಕಾವೇರಿ ಕ್ಷೇತ್ರವನ್ನು ಪುಣ್ಯಕ್ಷೇತ್ರವೆಂದು ಪರಿಗಣಿಸುವಂತೆ ಒತ್ತಾಯಿಸಿದೆ.
ಕಾಮಗಾರಿಯನ್ನು ಸ್ಥಗಿತ ಗೊಳಿಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಮತ್ತು ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯ ಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಕ್ರಮವನ್ನು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಿಯಪ್ಪ, ಯೂಥ್ ವಿಂಗ್ ವಿಭಾಗದ ಮುಖ್ಯಸ್ಥ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಪೊಮ್ಮಕ್ಕಡ ಪರಿಷತ್ ಮತ್ತು ಪದಾಧಿಕಾರಿಗಳು ಸ್ವಾಗತಿಸಿದ್ದಾರೆ.
ಗ್ಲಾಸ್ ಬ್ರಿಡ್ಜ್ ಮತ್ತು ಇತರ ಪ್ರವಾಸೋದ್ಯಮ ಕಾಮಗಾರಿಗಳು ಪಶ್ಚಿಮ ಘಟ್ಟದ ತಲಕಾವೇರಿ ಸೂಕ್ಷö್ಮ ವಲಯ ಪ್ರದೇಶದಲ್ಲಿ ಸ್ಥಾಪಿತವಾದರೆ ಭಕ್ತಾದಿಗಳ ಭಾವನೆಗೆ ಧಕ್ಕೆ ತರುವುದರಲ್ಲಿ ಮತ್ತು ಪರಿಸರಕ್ಕೆ ಮಾರಕವಾಗುವುದರಲ್ಲಿ ಸಂಶಯವಿಲ್ಲ ಎಂಬ ಅಭಿಪ್ರಾಯವನ್ನು ವ್ಯಕಪಡಿಸಿರುವ ಸಂಘಟನೆ ಪ್ರಮುಖರು, ಭಾಗಮಂಡಲ ಮತ್ತು ತಲಕಾವೇರಿಯನ್ನು ಪುಣ್ಯ ಕ್ಷೇತ್ರಗಳೆಂದು ಪರಿಗಣಿಸಿ ರಾಜ್ಯದ ಪ್ರವಾಸೋದ್ಯಮ ಪಟ್ಟಿಯಿಂದ ಕೈಬಿಡುವಂತೆ ಮತ್ತು ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಸೂಚಿಸಲು ಮಾನ್ಯ ಮುಖ್ಯಮಂತ್ರಿ ಯವರಿಗೆ, ಪ್ರವಾಸೋದ್ಯಮ ಇಲಾಖೆಗೆ ಶಾಸಕ ಪೊನ್ನಣ್ಣ ಮೂಲಕ ಪತ್ರ ಬರೆದು ಆಗ್ರಹಪಡಿಸುವುದಾಗಿ ತಿಳಿಸಿದ್ದಾರೆ.