ಭಾಗಮಂಡಲ, ಅ. ೨: ಜೀವನ ನಿರ್ವಹಣೆಗಾಗಿ ದುಡಿಮೆಯತ್ತ ಗಮನಹರಿಸುವ ಆಟೋ ಚಾಲಕರು ತಮ್ಮ ಒಂದು ದಿನದ ಸಮಯವನ್ನು ಸ್ವಚ್ಛತಾ ಕಾರ್ಯಕ್ರಮಕ್ಕೆ ಮೀಸಲಿಟ್ಟರು. ಸಮಾಜ ಸೇವೆಯ ರೂಪದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿ ನಿತ್ಯ ಜೀವನದ ಏಕತಾನತೆಯಿಂದ ದೂರವಾಗಿ ಮನೋರಂಜನೆ ಹೊಂದಿದರು.
ಇದು ನಡೆದದ್ದು ಭಾಗಮಂಡಲದಲ್ಲಿ. ಭಾಗಮಂಡಲದ ಶ್ರೀ ಕಾವೇರಿ ಆಟೋ ಚಾಲಕರ ಸಂಘದ ವತಿಯಿಂದ ಭಾಗಮಂಡಲ ದಲ್ಲಿ ಆಯೋಜಿಸಲಾಗಿದ್ದ ೨೩ನೇ ವರ್ಷದ ಸ್ವಚ್ಛತಾ ಅಭಿಯಾನಕ್ಕೆ ಭಾಗಮಂಡಲ ಗ್ರಾಮ ಪಂಚಾಯಿತಿ ಪಿಡಿಒ ನಂದ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ವಿಶ್ವ ನಾಯಕ ನರೇಂದ್ರ ಮೋದಿ ಸ್ವಚ್ಛತಾ ಕಾರ್ಯಕ್ರಮಕ್ಕೆ ನಾಂದಿ ಹಾಡಿದ್ದಾರೆ. ಅವರ ಜನ್ಮದಿನದ ಪ್ರಯುಕ್ತ ಆಟೋ ಚಾಲಕರ ಸಂಘದ ವತಿಯಿಂದ ಪ್ರತಿ ವರ್ಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಜೊತೆಗೆ ರಕ್ತದಾನ ಶಿಬಿರವನ್ನು ಆಯೋಜಿಸಿ ಸಾಮಾಜಿಕ ಸೇವಾ ಕಾರ್ಯವನ್ನು ಕೈಗೊಳ್ಳಲಾಗುತ್ತಿರುವುದು ಶ್ಲಾಘನೀಯ ಎಂದರು.
ಸದಸ್ಯ ಹೊಸೂರು ಸತೀಶ್ ಕುಮಾರ್ ಮಾತನಾಡಿ ಇನ್ನೊಬ್ಬರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸುವ ರಕ್ತವನ್ನು ದಾನ ಮಾಡುವ ಕಾರ್ಯಕ್ರಮ ದೇಶದ ಉದ್ದಗಲಕ್ಕೆ ನಡೆಯುತ್ತಿದೆ. ಸಾರ್ವಜನಿಕ ಜೀವನದಲ್ಲಿ ಇನ್ನೊಬ್ಬರ ಜೀವನಕ್ಕೆ ಬೆಳಕಾಗುವುದು ಅಗತ್ಯ. ಈ ನಿಟ್ಟಿನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸು ತ್ತಿರುವ ಆಟೋ ಚಾಲಕರ ಸಂಘದ ಕಾರ್ಯ ಪ್ರಶಂಶನಿಯ ಎಂದರು.
ಸ್ವಚ್ಛತಾ ಅಭಿಯಾನದ ಕುರಿತು ಮಾತನಾಡಿದ ಅವರು ವಿದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಸ್ವಚ್ಛತೆಗೆ ಆದ್ಯತೆ ಕಡಿಮೆ. ಇದು ನಮ್ಮ ದೇಶದ ಒಂದು ಪಿಡುಗು ಆಗಿದೆ; ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಪರಿಸರ ಮಾಲಿನ್ಯದಿಂದ ರೋಗರುಜಿನಗಳು, ಹರಡುತ್ತವೆ. ಮಾರಕ ರೋಗಗಳಿಂದ ಜನಸಾಮಾನ್ಯರ ಜೀವಕ್ಕೆ ಹಾನಿ ಯಾಗುತ್ತದೆ. ಪರಿಸರವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಅದು ಭಾಗಮಂಡಲದಲ್ಲಿ ಜಾತ್ರೆ ಸಮಯಕ್ಕೆ ಮಾತ್ರ ಸೀಮಿತವಾಗಬಾರದು. ವರ್ಷದ ಎಲ್ಲಾ ಅವಧಿಯಲ್ಲೂ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟು ಕೊಳ್ಳುವಂತಹ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.
ಮಡಿಕೇರಿ ಮೆಡಿಕಲ್ ಕಾಲೇಜಿನ ಶಸ್ತçಚಿಕಿತ್ಸೆ ವಿಭಾಗದ ವೈದ್ಯ ಕಾರ್ಯಪ್ಪ ಮಾತನಾಡಿ, ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದರೂ ರಕ್ತ ಉತ್ಪತ್ತಿ ಮಾಡುವುದು ಸಾಧ್ಯವಿಲ್ಲ. ಇಂದು ರಕ್ತದ ಬೇಡಿಕೆ ಹೆಚ್ಚಿದೆ; ಸಂಘ ಸಂಸ್ಥೆಗಳು ಮುಂದೆ ಬಂದು ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ಹಾನಿಯಾಗುತ್ತದೆ ಎಂಬ ಮೂಢನಂಬಿಕೆಯನ್ನು ಬಿಟ್ಟು ಯುವಜನರು ರಕ್ತದಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು. ಭಾಗಮಂಡಲ ಠಾಣಾಧಿಕಾರಿ ಶೋಭ ಲಾಮಣಿ, ಪತ್ರಕರ್ತ ಕುಯ್ಯಮುಡಿ ಸುನಿಲ್, ಪಂಚಾಯಿತಿ ಸದಸ್ಯರಾದ ಜಯಂತ್, ನಾಗೇಶ್, ವೀಣಾ ಉಪಸ್ಥಿತರಿದ್ದರು. ಭಾಗಮಂಡಲ ದಿಂದ ತಲಕಾವೇರಿವರೆಗೆ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು. ರಕ್ತದಾನ ಶಿಬಿರದಲ್ಲಿ ಆಟೋ ಚಾಲಕರ ಸಂಘದ ಸದಸ್ಯರು ಸೇರಿದಂತೆ ೪೦ ಮಂದಿ ರಕ್ತದಾನ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಿರಕಜೆ ಭವನ್ ಕುಮಾರ್ ವಹಿಸಿದ್ದರು. ಚಂದ್ರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿವ ಕೂಡಕಂಡಿ ನಿರೂಪಿಸಿದರೆ, ನಿಡುಬೆ ವೆಂಕಟರಮಣ ವಂದಿಸಿದರು.
-ಸುನಿಲ್.