ಸಿದ್ದಾಪುರ, ಅ. ೨: ಕೆರೆಯಲ್ಲಿ ಕಾಲು ಜಾರಿ ಬಿದ್ದ ಮಹಿಳೆಯ ಪ್ರಾಣವನ್ನು ಯುವಕರಿಬ್ಬರು ರಕ್ಷಣೆ ಮಾಡಿದ ಘಟನೆ ಅಮ್ಮತ್ತಿ ಕಾರ್ಮಾಡು ಗ್ರಾಮದ ಚೌಡೇಶ್ವರಿ ನಗರದಲ್ಲಿ ನಡೆದಿದೆ. ಅಮ್ಮತ್ತಿಯ ಕಾರ್ಮಾಡು ಗ್ರಾಮದ ಚೌಡೇಶ್ವರಿ ನಗರದಲ್ಲಿ ಪ್ರತಿಷ್ಠಾಪನೆ ಮಾಡಿದ ಗೌರಿ-ಗಣೇಶ ಮೂರ್ತಿಗಳನ್ನು ಅಲ್ಲಿನ ಕೆರೆಯಲ್ಲಿ ವಿಸರ್ಜಿಸಲು ಮೆರವಣಿಗೆಯ ಮುಖಾಂತರ ಸ್ಥಳೀಯರು ತೆರಳುತ್ತಿದ್ದರು.

ಈ ಸಂದರ್ಭದಲ್ಲಿ ವಿಸರ್ಜನೆಗೆ ಮೂರ್ತಿಗಳನ್ನು ಕೆರೆಯ ಬಳಿ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಚೌಡೇಶ್ವರಿ ನಗರದ ಮಹಿಳೆಯೊಬ್ಬರು ಕೆರೆಯ ಇನ್ನೊಂದು ಬದಿಯಲ್ಲಿ ನಿಂತು ನೋಡುತ್ತಿದ್ದರು ಎನ್ನಲಾಗಿದೆ. ಮಳೆ ನೀರಿನಿಂದ ಕೆರೆಯ ಬದಿಯಲ್ಲಿದ್ದ ಕೆಸರಿಗೆ ಕಾಲು ಸಿಲುಕಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ.

ಈ ಸಂದರ್ಭದಲ್ಲಿ ಕೆರೆಯ ಮತ್ತೊಂದು ಬದಿಯಲ್ಲಿದ್ದ ಅಮ್ಮತ್ತಿ ಕಾರ್ಮಾಡು ಗ್ರಾಮದ ಚೌಡೇಶ್ವರಿ ನಗರದ ನಿವಾಸಿಗಳಾದ ಯುವಕರಾದ ಶಿವಕುಮಾರ್ ಮತ್ತು ಸಂಕೇತ್ ಕೂಡಲೇ ಕೆರೆಯ ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ರಕ್ಷಿಸಲು ಕೆರೆಗೆ ಧುಮುಕಿದರು. ತುಂಬಿದ ಕೆರೆಯಲ್ಲಿ ಮಹಿಳೆಯನ್ನು ಎಳೆದು ತಂದು ರಕ್ಷಿಸಿ ಪ್ರಾಣಪಾಯದಿಂದ ಪಾರು ಮಾಡಿದರು. ಈ ಸಂದರ್ಭದಲ್ಲಿ ಗೌರಿ-ಗಣೇಶ ವಿಸರ್ಜನೆಗೆ ಆಗಮಿಸಿದ ಸ್ಥಳೀಯರು ಈ ಕಾರ್ಯದ ಬಗ್ಗೆ ಹಾಗೂ ಯುವಕರ ಸಮಯ ಪ್ರಜ್ಞೆ ಸಾಹಸದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. - ವರದಿ : ವಾಸು