ಸೋಮವಾರಪೇಟೆ, ಅ. ೧: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ಧೂರಿಯಾಗಿ ಆಯುಧ ಪೂಜೋತ್ಸವ ಸಮಾರಂಭ ಆಯೋಜಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಕೆ.ಜಿ. ಸುರೇಶ್ ತಿಳಿಸಿದ್ದಾರೆ.

ಪಟ್ಟಣದ ಪತ್ರಿಕಾಭವನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ೪೬ ವರ್ಷಗಳಿಂದ ಮೋಟಾರ್ ಯೂನಿಯನ್ ವತಿಯಿಂದ ಪಟ್ಟಣದಲ್ಲಿ ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಆಯುಧ ಪೂಜೋತ್ಸವವನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಈ ವರ್ಷವೂ ಸಹ ತಾ. ೨೩ ರಂದು ಸಮಾರಂಭ ಆಯೋಜಿಸಲಾಗಿದೆ ಎಂದರು.

ಆಯುಧ ಪೂಜೋತ್ಸವ ಪ್ರಯುಕ್ತ ತಾ. ೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಂಘದ ಸದಸ್ಯರುಗಳಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸ ಲಾಗಿದೆ. ಕ್ರೀಡಾಕೂಟದಲ್ಲಿ ವಿಜೇತರಾಗುವ ಸದಸ್ಯರಿಗೆ ಆಯುಧ ಪೂಜೋತ್ಸವದಂದು ಬಹುಮಾನ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ತಾ. ೨೩ ರಂದು ಬೆಳಿಗ್ಗೆ ಸಂಘದ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು. ನಂತರ ಪಟ್ಟಣದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುವುದು. ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಗುವುದು ಎಂದ ಅವರು, ೧೦ ಗಂಟೆಗೆ ಖಾಸಗಿ ಬಸ್ ನಿಲ್ದಾಣದಲ್ಲಿ ಆಯುಧ ಪೂಜಾ ಸಮಾರಂಭದ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು. ಕಾರ್ಯಕ್ರಮದ ಅಂಗವಾಗಿ ನೃತ್ಯ ಸ್ಪರ್ಧೆ ನಡೆಯ ಲಿದ್ದು, ವಿಜೇತರಿಗೆ ಬಹುಮಾನ ವಿತರಿಸ ಲಾಗುವುದು. ಮಧ್ಯಾಹ್ನ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ಮಾಡಲಾಗುವುದು. ಸಂಜೆ ೭ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಡಾ. ಮಂಥರ್ ಗೌಡ, ಹುಣಸೂರು ಕ್ಷೇತ್ರದ ಶಾಸಕ ಹರೀಶ್ ಗೌಡ, ಕಾಂಗ್ರೆಸ್ ಮುಖಂಡ ಶುಶ್ರೂತ್ ಗೌಡ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರುಗಳಾದ ಡಿ.ಜೆ. ಪರಮೇಶ್, ಜಿ.ಆರ್. ಹಾಲಪ್ಪ ಸೇರಿದಂತೆ ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಇಂದಿರಾಗಾAಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಪ.ಪಂ. ಸಿಬ್ಬಂದಿ ಆದಿಲ್ ಅವರುಗಳನ್ನು ಸನ್ಮಾನಿಸ ಲಾಗುವುದು. ಅಲಂಕೃತ ವರ್ಕ್ ಶಾಪ್, ವಾಹನಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದರು.

ನAತರ ಬೆಂಗಳೂರಿನ ವಿ.ಪಿ. ಈವೆಂಟ್ಸ್ ತಂಡದಿAದ ಸಂಗೀತ ರಸಮಂಜರಿ ಆಯೋಜಿಸಲಾಗಿದೆ. ಕಿರುತೆರೆಯ ಸರಿಗಮಪ ಕಲಾವಿದರು ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದ ಕೆ.ಜಿ. ಸುರೇಶ್ ಅವರು, ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಮೊ: ೯೪೪೮೫೦೪೪೭೭, ೯೮೪೪೪೬೧೧೩೪ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾರ್ಯದರ್ಶಿ ವಿನ್ಸಿ ಡಿಸೋಜ, ಖಜಾಂಚಿ ಮಣಿ ಕುಶಾಲಪ್ಪ, ಸಲಹೆಗಾರ ರಂಗಸ್ವಾಮಿ ಉಪಸ್ಥಿತರಿದ್ದರು.