ಕುಶಾಲನಗರ, ಸೆ. ೩೦: ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುವ ಶಾಲೆಗಳ ಆಡಳಿತ ಮಂಡಳಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರಗಳ ಮೂಲಕ ಪ್ರಯತ್ನಿಸಲಾಗುವುದು ಎಂದು ಕೊಡಗು ಮೈಸೂರು ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಭರವಸೆ ನೀಡಿದ್ದಾರೆ.

ಕುಶಾಲನಗರದಲ್ಲಿ ನಡೆದ ಕೊಡಗು ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟದ ಜಿಲ್ಲಾ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಸರಕಾರದ ನಿಯಮಗಳು ಕೇವಲ ಖಾಸಗಿ ಶಾಲೆಗಳಿಗೆ ಮೀಸಲಾಗ ಬಾರದು. ಸರಕಾರಿ ಶಾಲೆಗಳಿಗೆ ಕೂಡ ಎಲ್ಲಾ ನಿಯಮಗಳು ಕಟ್ಟುನಿಟ್ಟಾಗಿ ಅಳವಡಿಕೆ ಆಗಬೇಕಾಗಿದೆ, ಇದರಿಂದ ಉತ್ತಮ ಶಿಕ್ಷಣ ಮೌಲ್ಯ ಗಳಿಸಲು ಸಾಧ್ಯ, ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಹರಿಸಬೇಕಾಗಿದೆ ಎಂದರು.

ಖಾಸಗಿ ಶಾಲೆಗಳ ಶಿಕ್ಷಕರುಗಳಿಗೆ ಸರಕಾರಿ ಶಾಲಾ ಶಿಕ್ಷಕರಂತೆ ಸೌಲಭ್ಯಗಳು ದೊರೆತಲ್ಲಿ ಅವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದ ಪ್ರತಾಪ್ ಸಿಂಹ ಖಾಸಗಿ ಶಾಲೆಗಳಲ್ಲಿ ಉತ್ತಮ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಮಾತನಾಡಿ, ಶಿಕ್ಷಣದ ಜೊತೆಗೆ ಶಿಸ್ತಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಅನುದಾನಿತ, ಅನುದಾನ ರಹಿತ ಶಾಲೆಗಳು ಒಂದೇ ನಿಯಮದಡಿಯಲ್ಲಿ ಸಾಗಬೇಕು. ಅಂತರವಿದ್ದಲ್ಲಿ ಸರಕಾರದ ಮೂಲಕ ಅದನ್ನು ಸರಿಪಡಿಸಲಾಗುವುದು. ಉತ್ತಮ ಶಿಕ್ಷಕರ ಮೂಲಕ ಸಮಾಜದ ಬದಲಾವಣೆ ಸಾಧ್ಯ. ಶಿಕ್ಷಕರು ಮಕ್ಕಳೊಂದಿಗೆ ಸ್ನೇಹ ಜೀವಿಗಳಾಗಿ ವರ್ತಿಸಬೇಕು. ಮಕ್ಕಳ ಪೋಷಕರ ಸಮಸ್ಯೆಗಳನ್ನು ಅರಿತು ಶಿಕ್ಷಣ ನೀಡುವ ಪ್ರಯತ್ನ ನಡೆಯಬೇಕು. ಅನುದಾನ ರಹಿತ ಶಾಲೆಗಳ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಬಹು ಪ್ರಮುಖವಾಗಿದ್ದು ನಾಡಿನ ಅಭಿವೃದ್ಧಿಯಲ್ಲಿ ತಮ್ಮ ಪಾತ್ರ ಹಿರಿದಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಶಿಕ್ಷಣ ಉಳ್ಳವರ ಪಾಲಾಗಬಾರದು ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಬೇಕಾಗಿದೆ. ಖಾಸಗಿ ಶಾಲೆಗಳಿಗೆ ಅನ್ವಯವಾಗುವ ಎಲ್ಲಾ ನಿಯಮಗಳು ಸರ್ಕಾರಿ ಶಾಲೆಗಳಿಗೂ ಅನ್ವಯವಾಗಬೇಕು. ಸರ್ಕಾರಿ ಶಾಲೆಗಳ ಉದ್ಯೋಗಿಗಳಿಗೆ ದೊರಕುವ ಸೌಲಭ್ಯಗಳು ಪ್ರತಿಯೊಬ್ಬ ಶಿಕ್ಷಕರಿಗೂ ದೊರಕುವಂತಾಗಬೇಕು ಎಂದರು.

ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆ ಮೂಲಕ ಸರ್ಕಾರದ ಕಣ್ತೆರೆಸಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಸಿ.ಜಿ. ಕುಶಾಲಪ್ಪ, ಶಿಕ್ಷಕರ ಮೂಲಕ ಸುಭಿಕ್ಷ ನಾಡು ನಿರ್ಮಾಣ ಸಾಧ್ಯ ಎಂದ ಅವರು ಕೊಡಗು ಜಿಲ್ಲೆ ಶಿಕ್ಷಣ ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿದೆ. ಶಿಕ್ಷಣ ಕ್ಷೇತ್ರ ಜೀವನದಲ್ಲಿ ಮಾರ್ಪಾಡು ಮಾಡುವ ಕ್ಷೇತ್ರವಾಗಿದೆ ಎಂದರು.

ಒಕ್ಕೂಟದ ಅಧ್ಯಕ್ಷ ಕೋಳೆರ ಝರು ಗಣಪತಿ ಅಧ್ಯಕ್ಷತೆ ವಹಿಸಿ ಖಾಸಗಿ ಶಾಲೆಗಳು ಎದುರಿಸುತ್ತಿರುವ ಕೆಲವು ಸಮಸ್ಯೆಗಳ ಬಗ್ಗೆ ಮಾಹಿತಿ ಒದಗಿಸಿದರು. ಪ್ರತಿ ವರ್ಷ ಶಾಲಾ ಮಾನ್ಯತೆ ನವೀಕರಣ ಮಾಡುವುದು, ಮಾನ್ಯತೆ ನವೀಕರಿಸಲು ಪ್ರತಿ ತರಗತಿಯಲ್ಲಿಯೂ ಇಂತಿಷ್ಟು ವಿದ್ಯಾರ್ಥಿಗಳ ಇರಬೇಕೆಂಬ ನಿಬಂಧನೆಗಳು, ಅಗ್ನಿ ಸುರಕ್ಷತೆ ಪ್ರಮಾಣ ಪತ್ರ ಪಡೆಯಲು ಅತಿ ಹೆಚ್ಚಿನ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ, ಖಾಸಗಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳನ್ನು ಸರಕಾರದ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಪರಿಗಣಿಸದೆ ಇರುವುದು, ಸರ್ಕಾರದಿಂದ ಅನುದಾನ ರಹಿತ ಸಂಸ್ಥೆಗಳಿಗೆ ಯಾವುದೇ ರೀತಿಯ ಆರ್ಥಿಕ ಸಹಕಾರಗಳು ದೊರೆಯದೆ ಇರುವುದು, ಶಾಲೆಗಳಿಗೆ ನೀಡಬೇಕಾದ ಆರ್ ಟಿ ಇ ಶುಲ್ಕ ಮರು ಪಾವತಿ ಹಣವನ್ನು ಸಕಾಲಕ್ಕೆ ಬಿಡುಗಡೆ ಮಾಡದಿರುವುದು, ಸರ್ಕಾರದ ಪುರಸ್ಕಾರ ಪ್ರಶಸ್ತಿಗಳನ್ನು ಖಾಸಗಿ ಶಾಲಾ ಶಿಕ್ಷಕರಿಗೆ ನೀಡದಿರುವುದು ಮತ್ತು ಶಿಕ್ಷಕರ ಕಲ್ಯಾಣ ನಿಧಿಗಳಿಗೆ ವಂತಿಗೆ ನೀಡಿದರು. ಅದರ ಪ್ರಯೋಜನ ಪಡೆಯಲು ಅರ್ಹತೆ ದೊರೆಯದಿರುವುದು. ಈ ಬಗ್ಗೆ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ದೊರಕಿಸಿಕೊಳ್ಳಬೇಕೆಂದು ಅವರು ಜನಪ್ರತಿನಿಧಿಗಳ ಮೂಲಕ ಸರಕಾರಕ್ಕೆ ಬೇಡಿಕೆಗಳ ಮನವಿ ಸಲ್ಲಿಸಿದರು.

ಒಕ್ಕೂಟದ ಉಪಾಧ್ಯಕ್ಷ ಎಂ.ಟಿ. ದಾಮೋದರ್, ಪ್ರಧಾನ ಕಾರ್ಯದರ್ಶಿ ಕೊಟ್ರಂಗಡ ತಿಮ್ಮಯ್ಯ, ಸಲಹೆಗಾರ ಮಾದಂಡ ಎಸ್. ಪೂವಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಾವೇಶದಲ್ಲಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಒಕ್ಕೂಟದ ಪ್ರತಿನಿಧಿಗಳಾದ ಡಿ. ಸುಜಲದೇವಿ, ಉಮಾ ಪ್ರಭಾಕರ್ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕಾರಿ ಸಮಿತಿ ಸದಸ್ಯರಾದ ಪೊನ್ನಚನ ಮೋಹನ್, ಸಚಿನ್ ವಾಸುದೇವ್, ಬಿ.ಪಿ. ಬೋಪಣ್ಣ, ವೆಂಕಟೇಶ್ ಮತ್ತಿತರರು ಇದ್ದರು.