ಮಡಿಕೇರಿ, ಸೆ. ೩೦: ಭಾರತೀಯ ಸೇನಾಪಡೆಗಳ ನಡುವೆ ನಡೆದ ಹಾಕಿ ಪಂದ್ಯಾವಳಿಯಲ್ಲಿ ೩೭ ಕೂರ್ಗ್ ಮೀಡಿಯಂ ರೆಜಿಮೆಂಟ್ ಸತತ ಮೂರನೇ ಬಾರಿಗೆ ಗೆಲುವು ಸಾಧಿಸುವದರೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಪಂಜಾಬ್‌ನ ಫಿರೋಜ್‌ಪುರ ದಲ್ಲಿ ನಡೆದ ಪಂದ್ಯಾವಳಿಯಲ್ಲಿ ಬಹುತೇಕ ಕೊಡಗು ಜಿಲ್ಲೆಯ ಆಟಗಾರರನ್ನೊಳಗೊಂಡಿರುವ ಕೂರ್ಗ್ ರೆಜಿಮೆಂಟ್ ತಂಡ ಅಂತಿಮ ಪಂದ್ಯಾವಳಿಯಲ್ಲಿ ೨೮ ಪಂಜಾಬ್ ತಂಡವನ್ನು ೪-೧ ಗೋಲುಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಳೆದ ಎರಡು ವರ್ಷಗಳಿಂದ ಚಾಂಪಿಯನ್ ಆಗಿರುವ ತಂಡ ಈ ಬಾರಿಯೂ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದೆ.

ಕ್ಯಾ. ಅಜಿಂಕ್ಯ ಮಂಜ್ರೇಕರ್ ಹಾಗೂ ಲೆ. ಶಿವಮ್ ಸಿಂಗ್ ಮುನ್ನಡೆಸಿದ ತಂಡದಲ್ಲಿ ಕೊಡಗಿನ ಆಟಗಾರರಾದ ನಾಪಂಡ ಪ್ರವೀಣ್, ಬಟ್ಟಕಾಳಂಡ ರೋಷನ್ ತಿಮ್ಮಯ್ಯ, ಯಡೂರು ಸಂಜಯ್, ಅಪ್ಪಶೆಟ್ಟಳ್ಳಿ ಅಕ್ಷತ್, ಕೇಲೇಟಿರ ಕಾರ್ಯಪ್ಪ, ಮಾನಡ್ಕನ ದೀಪಕ್ ಗೋಪಾಲ್, ಮಿಲನ್ ಪೂಜಾರಿ, ಕೊಟ್ಟಕೇರಿಯನ ಜಗ್ಗೇಶ್, ಅಲ್ಲಂಡ ಮುತ್ತಣ್ಣ, ವಿವೇಕ್ ರೈ, ಕಾಕೇರ ಸುನಿಲ್, ಕಟ್ಟೆಮನೆ ಲಿತಿನ್, ಕೊಂಪುಳಿರ ಯಶ್ವಂತ್, ನೆಲ್ಲಮಕ್ಕಡ ಸಚಿನ್, ಪಟ್ಟಡ ಹನಿತ್, ಮಲ್ಲೇಂಗಡ ಹರ್ಷಿತ್ ಪೊನ್ನಪ್ಪ, ತೀತಿಮಾಡ ಮೇದಪ್ಪ, ಕುಮ್ಮಂಡ ಕುಶಾಲಪ್ಪ, ಕೋಟೇರ ಕೌಶಿಕ್ ಆಟ ಪ್ರದರ್ಶಿಸಿದರು. ತರಬೇತುದಾರರಾಗಿ ಗುರುಮೀತ್ ಸಿಂಗ್ ಖೇರ ಹಾಗೂ ವ್ಯವಸ್ಥಾಪಕರಾಗಿ ಜಿಲ್ಲೆಯವರಾದ ಚೊಟ್ಟಂಗಡ ಎಸ್. ರೂಪೇಶ್ ಕಾರ್ಯನಿರ್ವಹಿಸಿದರು.