ವೀರಾಜಪೇಟೆ, ಸೆ. ೩೦: ಶಿಕ್ಷಣ ಕ್ಷೇತ್ರ ಸವಾಲಿನ ಹಾಗೂ ಜವಾಬ್ದಾರಿಯುತವಾದ ಕ್ಷೇತ್ರ, ಇಲ್ಲಿ ರಾಜಿ ಎನ್ನುವುದಿಲ್ಲ. ಇಲ್ಲಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿರುತ್ತದೆ ಎಂದು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ, ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ‘ರಾಜ್ಯ ನಾಗರಿಕ ಸೇವಾ ನಿಯಮ ಮತ್ತು ಸಂಗ್ರಹಣೆಗಳಲ್ಲಿ ಪಾರದರ್ಶಕತೆಯ ಅಧಿನಿಯಮ’ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಬದ್ಧತೆ, ಕಾನೂನಿನ ಅರಿವು, ಕರ್ತವ್ಯ ಪ್ರಜ್ಞೆ, ಮೂರನ್ನು ಬದುಕಿನಲ್ಲಿ ರೂಢಿಸಿಕೊಂಡು ಅದನ್ನು ಸಾವಿರಾರು ಮಕ್ಕಳಿಗೆ ಪಠ್ಯದೊಂದಿಗೆ ಬೋಧಿಸಬೇಕು. ಅಂದಿನಿAದ ಇಂದಿನವರಗೆ ಶಿಕ್ಷಣ ಕ್ಷೇತ್ರ ಸವಾಲಿನಿಂದ ಕೂಡಿದೆ. ಜಾಲತಾಣದ ಮೂಲಕ ಇಂದು ಎಲ್ಲವು ತಮ್ಮ ಕಿಸೆಗೆ ಬರುತ್ತಿದೆ ಆದರೆ ಯಾವುದನ್ನು ಪಡೆಯಬೇಕು ಯಾವುದನ್ನು ಬಿಡಬೇಕು ಎಂಬ ಅರಿವು ವಿದ್ಯಾರ್ಥಿಗಳಿಗೆ ಇಲ್ಲ. ಆದ್ದರಿಂದ ಅವರ ಮನೋವಿಕಾರವಾಗದಂತೆ ಶಿಕ್ಷಕರು ನೋಡಿಕೊಳ್ಳಬೇಕು ಎಂದರು.
ರಾಜ್ಯದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ರಾಜ್ಯದ ನಾಗರಿಕ ಸೇವಾ ನಿಯಮ ಮತ್ತು ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಎಂಬ ಎರಡು ಕಾನೂನುಗಳನ್ನು ವಿದ್ಯಾರ್ಥಿದೆಸೆಯಲ್ಲಿಯೇ ಅವರಿಗೆ ಶಿಕ್ಷಕರು ಅರಿವು ಮೂಡಿಸಬೇಕು. ಸಂವಿಧಾನದ ೧೪ ನೇ ಪರಿಚ್ಛೇದದಲ್ಲಿ ಎಲ್ಲರಿಗೂ ಸಮಾನ ಹಕ್ಕನ್ನು ನೀಡಲಾಗಿದೆ. ಇದೇ ಪರಿಚ್ಛೇದದಲ್ಲಿ ಸಂಗ್ರಹಣೆಯ ಪಾರದರ್ಶಕತೆ ಕಾನೂನು ಇದೆ. ಇದು ಬೇರೆ ದೇಶದಲ್ಲಿ ಕಾಣಲು ಸಾಧ್ಯವಿಲ್ಲ. ಇದರ ಬಗ್ಗೆ ಅಗತ್ಯವಾಗಿ ಅರಿವು ಇರಬೇಕು ಎಂದರು.
ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ ದಯಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರು ಯಲಹಂಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಟಿ.ಆರ್ ಮಂಜುನಾಥ್ ಕಾರ್ಯಾಗಾರದ ಸಂಚಾಲಕ ಮತ್ತು ಕಾಲೇಜಿನ ಐಕ್ಯೂಎಸಿ ಘಟಕದ ಸಂಚಾಲಕ ನಾಗರಾಜಮೂರ್ತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕ ವೃಂದದವರು ಹಾಜರಿದ್ದರು.