ಶನಿವಾರಸAತೆ, ಅ. ೧: ಮಾನವನ ಜೀವ ಉಳಿಸುವ ರಕ್ತದಾನ ಎಲ್ಲಾ ದಾನಗಳಿಗಿಂತಲೂ ಶ್ರೇಷ್ಠವಾಗಿದ್ದು ಈ ದಾನವನ್ನು ಜೀವದಾನ ಎಂದು ಕರೆದರೆ ಅತಿಶಯೋಕ್ತಿಯಾಗಲಾರದು ಎಂದು ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ.ಪಿ. ಕರುಂಬಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಮಿಲಾದ್ ಸಮಿತಿ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಈದ್ಗಾ ಮಸೀದಿ ಆವರಣದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲವಾದ ಕಾರಣ ರಕ್ತದಾನಕ್ಕೆ ಬಹಳ ಮಹತ್ವವಿದೆ ಆರೋಗ್ಯ ಭಾಗ್ಯಕ್ಕಾಗಿ ಮನುಷ್ಯ ವರ್ಷಕ್ಕೊಮ್ಮೆ ರಕ್ತದಾನ ಮಾಡಬಹುದು. ಇದರಿಂದ ದೇಹದ ಕೊಲೆಸ್ಟಾರ್ ಕಡಿಮೆಯಾಗುತ್ತದೆ. ಆರೋಗ್ಯ ಭಾಗ್ಯವನ್ನು ಕಾಪಾಡಿ ಕೊಳ್ಳಬಹುದು. ಪ್ರಸ್ತುತ ದಿನಗಳಲ್ಲಿ ಯುವಜನಾಂಗ ರಕ್ತದಾನದ ಬಗ್ಗೆ ಒಲವು ತೋರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದ್ದು ಸಮಾಜಮುಖಿ ಕಾರ್ಯವಾಗಿದೆ ಎಂದರು. ಹಾಜಿ ಮುನಾವರ್ ಸಾಬ್ ಶಿಬಿರ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜಾಮೀಯಾ ಮಸೀದಿ ಅಧ್ಯಕ್ಷ ಜನಾಬ್ ರಿಶಾಲತ್ ಪಾಷ ಮಾತನಾಡಿ, ರಕ್ತದಾನಿಗಳಿಗೆ ಶುಭ ಕೋರಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಪೂರ್ಣಿಮಾ ಮತ್ತು ತಂಡದವರು, ಈದ್ಗಾ ಮಸೀದಿಯ ಮೌಲಾನಾ ಮಹಮ್ಮದ್ ಸಾದಿಕ್, ಕಾರ್ಯಕ್ರಮ ಆಯೋಜಕ ಮುದಾಶೀರ್, ಮಿಲಾದ್ ಸಮಿತಿ ಪದಾಧಿಕಾರಿಗಳಾದ ಅಕ್ಮಲ್ ಪಾಷಾ, ಇಲಿಯಾಸ್ ಮಹಮ್ಮದ್ ಇತರ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕ ಇಲಿಯಾಸ್ ನಿರೂಪಿಸಿ, ವಂದಿಸಿದರು. ಶಿಬಿರದಲ್ಲಿ ೪೫ ಮಂದಿ ಪುರುಷರು ಹಾಗೂ ಓರ್ವ ಮಹಿಳೆ ರಕ್ತದಾನ ಮಾಡಿದರು.