ಮಡಿಕೇರಿ, ಸೆ. ೩೦: ಮೀನುಗಾರಿಕೆ ಇಲಾಖೆ ವತಿಯಿಂದ ನಗರದ ಎಫ್.ಎಂ.ಸಿ. ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ಒಂದು ದಿನದ ಕ್ಷೇತ್ರಕಾರ್ಯ ಭೇಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗುಹ್ಯದಲ್ಲಿರುವ ಅಕ್ವಾ ವೆಂಚರ್ ಮತ್ಸö್ಯ ಸೇವಾ ಕೇಂದ್ರದಲ್ಲಿ ಒಂದು ದಿನದ ತರಬೇತಿ ನಡೆಯಿತು. ಫಾರಂನ ಮಾಲೀಕ ಶ್ಯಾಮ್ ಅಯ್ಯಪ್ಪ ಅವರು ತಾವು ಕೈಗೊಂಡಿರುವ ಅಕ್ವಾಫೋನಿಕ್ ಮಾದರಿಯಲ್ಲಿ ಮೇಲೆ ಟೊಮೆಟೊ, ಸೌತೆಕಾಯಿ, ಕುಂಬಳಕಾಯಿ, ಮೂಲಂಗಿ ಮುಂತಾದ ತರಕಾರಿ, ಪಾಲಕ್, ಲೆಟ್ಯುಸ್, ಜುಕಣಿ ಮುಂತಾದ ಹಸಿರು ಸೊಪ್ಪು ಮತ್ತು ಸ್ಟಾçಬೆರಿ ಹಣ್ಣಿನ ಬೆಳೆಗಳು, ಹಾಗೆಯೇ ಮೀನು ಮರಿ ಪಾಲನೆ ನೀರನ್ನು ಶುದ್ಧೀಕರಿಸುವ ವಿಧಾನವನ್ನು ವಿವರಿಸಿದರು.

ಬಯೋಫ್ಲಾಕ್ ಟೆಕ್ನಾಲಜಿ ಬಳಸಿ ತಿಲಾಪಿಯ ಮೀನು ಮತ್ತು ಅಲಂಕಾರಿಕ ಮೀನುಗಳಾದ ಕೋಯಿ, ಗೋಲ್ಡ್ ಫಿಶ್ ಮುಂತಾದ ಮೀನುಗಳ ಉತ್ಪಾದನೆಯ ಕುರಿತು ಮಾಹಿತಿ ವಿನಿಮಯ ಮಾಡಿದರು. ಬೆಳೆದ ಮೀನಿನ ಮಾರುಕಟ್ಟೆ ವಿಧಾನದ ಕುರಿತ ವಿಚಾರ ವಿನಿಮಯ ಮಾಡಿದರು. ತಾವು ಬೆಳೆಸಿದ ಮೀನಿನಿಂದ ತಯಾರಿಸಿದ ಮೌಲ್ಯ ವರ್ಧಿತ ಉತ್ಪನ್ನಗಳ ಮಾಹಿತಿ ವಿಶೇಷವಾಗಿತ್ತು. ಶ್ಯಾಂ ಅವರ ಪತ್ನಿ ನಮಿತಾ ಅವರ ರೆಸಿಪಿಯಲ್ಲಿ ತಯಾರಾದ ಮೀನಿನ ಟಿಕ್ಕ, ಕಬಾಬ್‌ಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಇಲಾಖೆಯಿಂದ ದೊರೆಯುವ ವಿವಿಧ ಸವಲತ್ತುಗಳ ಬಗ್ಗೆ, ಕೃಷಿ ಹೊಂಡಗಳಲ್ಲಿ ಮೀನು ಕೃಷಿ ಸಾಕಣೆಯ ಕುರಿತು ಮಾಹಿತಿ ನೀಡಿದರು. ಆಸಕ್ತ ವಿದ್ಯಾರ್ಥಿಗಳು ಮನೆಯಲ್ಲಿ ಸಣ್ಣ ಸ್ಥಳಾವಕಾಶದಲ್ಲಿ ಹೇಗೆ ಅಲಂಕಾರಿಕ ಅಥವಾ ಆಹಾರದ ಮೀನು ಸಾಕಾಣೆ ಮಾಡಬಹುದು ಎನ್ನುವ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಮೀನುಗಾರಿಕೆ ಇಲಾಖೆಯ ಸಿಬ್ಬಂದಿ ಹೇಮಂತ್, ಸಮಾಜ ಕಾರ್ಯ ಉಪನ್ಯಾಸಕರಾದ ಮಧುಕರ್ ಮತ್ತು ಕಾಂಚನ ಗೌಡ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಜೀತ್ ವಂದಿಸಿದರು.