ಹೊದ್ದೂರು, ಸೆ. ೩೦: ಜಾಣೆ ಗೃಹಿಣಿಯಿಂದ ಕುಟುಂಬದ ಅಪೌಷ್ಟಿಕಾಂಶವು ಮುಕ್ತವಾಗಲಿದೆ. ಈ ನಿಟ್ಟಿನಲ್ಲಿ ಪ್ರತಿ ಮಹಿಳೆಯೂ ತಮ್ಮ ಮಹತ್ತರ ಜವಾಬ್ದಾರಿಯನ್ನು ಅರಿತು ಕಾರ್ಯತತ್ಪರರಾಗಬೇಕು ಎಂದು ಸಾಹಿತಿ, ಪತ್ರಕರ್ತ ಕೂಡಂಡ ರವಿ ಅಭಿಪ್ರಾಯಿಸಿದರು.

ಹೊದ್ದೂರಿನ ಪಂಚಾಯಿತಿ ಮತ್ತು ಸ್ಥಳೀಯ ಅಂಗನವಾಡಿಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು “ಸಮತೋಲನ ಆಹಾರದ ಸದ್ಭಳಕೆ” ಕುರಿತಾಗಿ ಮಾತನಾಡಿದರು.

ಕಾರ್ಯಕ್ರಮವು ಪಂಚಾಯಿತಿಯ ದಿ. ಕೋರನ ದೇವಯ್ಯ ಸೀತಮ್ಮ ಸಭಾಂಗಣದಲ್ಲಿ ಆಯೋಜಿತವಾಗಿತ್ತು. ಮಹಿಳೆಯರ ಜಾಣ್ಮೆಯು ಕುಟುಂಬಕ್ಕೆ ವರದಾನವಾಗಲಿದೆ. ಸಮತೋಲನ ಆಹಾರದ ಪಿರಮಿಡ್ ಕುರಿತಂತೆ ಬಹುತೇಕ ಮಹಿಳೆಯರು ಅರಿತಿದ್ದಾರೆ. ೨೦೨೩ರ ವರ್ಷವು ಅಂರ‍್ರಾಷ್ಟಿçÃಯ ಸಿರಿಧಾನ್ಯಗಳ ವರ್ಷವಾಗಿದೆ. ಇದರ ಮಹತ್ವವನ್ನು ಅರಿತು ಸಿರಿಧಾನ್ಯಗಳನ್ನು ತಮ್ಮ ದೈನಿಕ ಆಹಾರದಲ್ಲಿ ಬಳಸುವಂತಾಗಬೇಕು. ದ್ವಿದಳ ಧಾನ್ಯಗಳನ್ನು ಮೊಳಕೆ ಬರಿಸಿ, ಅಡುಗೆಯಲ್ಲಿ ಬಳಸಿ ಕುಟುಂಬದ ಸರ್ವ ಸದಸ್ಯರ ಆರೋಗ್ಯವನ್ನು ಕಾಪಾಡುವ ಮಹತ್ತರ ಹೊಣೆ ಜಾಣ ಗೃಹಿಣಿಯ ಮೇಲಿದೆ ಎಂದು ಅವರು ವಿವರವಿತ್ತರು. ಅಂಗನವಾಡಿಗಳು ಮತ್ತು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ದೊರೆಯುವ ಬಿ ಕಾಂಪ್ಲೆಕ್ಸ್, ಕ್ಯಾಲ್ಸಿಯಂ ಮುಂತಾದ ಮಾತ್ರೆಗ ಳೊಂದಿಗೆ ವೈದ್ಯರ ಸಲಹೆಯ ಮೇರೆಗೆ ಮೀನೆಣ್ಣೆಯ ಮಾತ್ರೆಗಳನ್ನು ಬಳಸಲು ಸೂಚಿಸಿದರು.

ಮಹಿಳಾ ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆಯ ಶೀಲಾ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ತಮ್ಮ ಇಲಾಖೆಗಳಿಂದ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ. ಹಂಸ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎ. ಅಬ್ದುಲ್ಲಾ, ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.