ಪೊನ್ನಂಪೇಟೆ, ಸೆ. ೩೦: ಪೊನ್ನಂಪೇಟೆಯಲ್ಲಿ ಮಳೆಯ ನಡುವೆಯೂ ವಿಜೃಂಭಣೆಯಿAದ ನಡೆದ ಗೌರಿ ಗಣೇಶೋತ್ಸವದಲ್ಲಿ ಪೊನ್ನಂಪೇಟೆ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಸಾವಿರಾರು ಜನರು ಪಾಲ್ಗೊಂಡು ಸಂಭ್ರಮಿಸಿದರು. ಪೊನ್ನಂಪೇಟೆ ವ್ಯಾಪ್ತಿಯ ವಿವಿಧ ೮ ಗೌರಿ ಗಣೇಶೋತ್ಸವ ಸಮಿತಿಗಳು ವಿದ್ಯುತ್ ದೀಪಾಲಂಕೃತ ವಾಹನಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಕಿಕ್ಕಿರಿದು ನಿಂತಿದ್ದ ಜನ ಸಾಗರದ ನಡುವೆ ಗಣೇಶ ಮೂರ್ತಿಗಳನ್ನು ಮೆರವಣಿಗೆ ನಡೆಸಿ ಬೆಳಗಿನ ಜಾವ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡುವ ಮೂಲಕ ಗಣೇಶೋತ್ಸವಕ್ಕೆ ತೆರೆ ಎಳೆಲಾಯಿತು. ಸಂಜೆ ೬ ಗಂಟೆಯಿAದಲೇ ತಮ್ಮ ತಮ್ಮ ಬಡಾವಣೆಯಿಂದ ಡಿಜೆ, ಬ್ಯಾಂಡ್ ಸೆಟ್, ವಾಲಗ ನಾದಕ್ಕೆ ಹೆಜ್ಜೆ ಹಾಕುತ್ತ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಹೊರಟು ಬಸವೇಶ್ವರ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ಗೌರಿ ಕೆರೆಗೆ ತೆರಳಿ ವಿಸರ್ಜನೆ ಮಾಡಲಾಯಿತು.

ಗಮನ ಸೆಳೆದ ಶೋಭಾಯಾತ್ರೆ

ಕೃಷ್ಣನಗರದ ಕೃಷ್ಣಯುವಕರ ಸಂಘದ ವತಿಯಿಂದ ೩೧ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಶೋಭಾಯಾತ್ರೆಯನ್ನು ನಡೆಸಲಾಯಿತು. ಶೋಭಾಯಾತ್ರೆಯಲ್ಲಿ ಪ್ರದರ್ಶನಗೊಂಡ ಧಾರ್ಮಿಕ ಹಿನ್ನೆಲೆಯ ಕಥಾನಕ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಪ್ರೇಕ್ಷಕರು ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ಜಯಘೋಷಣೆಯೊಂದಿಗೆ ಸಂಭ್ರಮಿಸಿದರು. ಯಾವುದೇ ರೀತಿಯ ಗಲಭೆಗಳಿಗೆ ಅವಕಾಶವಾಗದ ರೀತಿಯಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಬಸವೇಶ್ವರ ದೇವಸ್ಥಾನ ಸೇರಿದಂತೆ ಕೃಷ್ಣ ನಗರದ ಶ್ರೀ ಕೃಷ್ಣ ಯುವಕರ ಸಂಘ, ಶಿವ ಕಾಲೋನಿಯ ಶಿವ ಯುವಕ ಸಂಘ, ಎಂ.ಜಿ. ನಗರದ ಯುವ ಶಕ್ತಿ ಯುವಕ ಸಂಘ, ಮುಖ್ಯ ರಸ್ತೆಯಲ್ಲಿರುವ ವಿಘ್ನೇಶ್ವರ ವಾಹನ ಚಾಲಕ ಮತ್ತು ಮಾಲೀಕರ ಸಂಘ, ಕಾಟ್ರಕೊಲ್ಲಿ ಗಜಮುಖ ಗೆಳೆಯರ ಬಳಗ, ಜೋಡುಬೀಟಿ ಶ್ರೀ ವಿನಾಯಕ ಯುವಕರ ಸಂಘ, ಹಾಗೂ ಇದೇ ಮೊದಲ ಬಾರಿಗೆ ಗಣೇಶೋತ್ಸವದಲ್ಲಿ ಪಾಲ್ಗೊಂಡಿದ್ದ ಕಾವೇರಿ ನಗರದ ಗಜಾನನ ಯುವಕ ಸಂಘದವರು ವಿದ್ಯುತ್ ದೀಪಾಲಂಕೃತ ರಥಗಳಲ್ಲಿ ಗೌರಿ ಗಣೇಶ ಮೂರ್ತಿಯನ್ನು ತಮ್ಮ ತಮ್ಮ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಿದ ನಂತರ ಮುಖ್ಯರಸ್ತೆಯ ಮೂಲಕ ತೆರಳಿ ಗೌರಿಕೆರೆಯಲ್ಲಿ ವಿಸರ್ಜನೆ ನಡೆಸಿದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಸಭಾ ಕಾರ್ಯಕ್ರಮ : ಪೊನ್ನಂಪೇಟೆ ಶ್ರೀ ಬಸವೇಶ್ವರ ದೇವಸ್ಥಾನ ಹಾಗೂ ಶ್ರೀ ಗೌರಿ-ಗಣೇಶ ಉತ್ಸವ ಸಮಿತಿ ಹಾಗೂ ಪಟ್ಟಣದ ಆರು ಸಂಘಗಳ ಸಹಯೋಗದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಉಳಿವಿಗಾಗಿ ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದ್ದು, ಗೌರಿ-ಗಣೇಶೋತ್ಸವದ ಕಾರ್ಯಕ್ರಮಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ, ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವ ಮೂಲಕ, ನಮ್ಮ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಮಾತನಾಡಿ, ಗೌರಿ ಗಣೇಶ ಉತ್ಸವ ಹಿಂದೂ ಧರ್ಮದ ಪ್ರಮುಖ ಉತ್ಸವವಾಗಿದ್ದು, ಸರ್ವರೂ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿರುವಂತೆ ಕೋರಿದರು.

ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಏಷಿಯನ್ ಚಾಂಪಿಯನ್ ಖ್ಯಾತ ರ‍್ಯಾಲಿ ಪಟು, ಮೈಸೂರಿನ ಲೋಹಿತ್ ಅರಸು ಮಾತನಾಡಿ, ಗಣೇಶೋತ್ಸವ ಆಚರಣೆ ಹೇಗೆ ಪ್ರಾರಂಭವಾಯಿತು, ಅದರ ಮಹತ್ವವೇನು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಕೋಳೆರ ದಯಾ ಚಂಗಪ್ಪ, ಪೊನ್ನಂಪೇಟೆ ಗ್ರಾ.ಪಂ. ಸದಸ್ಯ ಮೂಕಳೆರ ಮಧು ಕುಮಾರ್, ಪೊನ್ನಂಪೇಟೆ ಕೊಡವ ಸಮಾಜ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಸಮಾಜ ಸೇವಕ ಮತ್ರಂಡ ದಿಲ್ಲು, ಕೃಷ್ಣ ಯುವಕ ಸಂಘದ ಅಧ್ಯಕ್ಷ ಸಿದ್ದು, ಶಿವ ಯುವಕ ಸಂಘದ ಅಧ್ಯಕ್ಷ ವಿಘ್ನೇಶ್, ಯುವ ಶಕ್ತಿ ಯುವಕ ಸಂಘದ ಅಧ್ಯಕ್ಷ ನಾಗೇಂದ್ರ, ವಿಘ್ನೇಶ್ವರ ವಾಹನ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ಪೊನ್ನಪ್ಪ, ವಿನಾಯಕ ಯುವಕ ಸಂಘದ ಅಧ್ಯಕ್ಷ ಅಮ್ಮತ್ತೀರ ಆರತಿ ಸುರೇಶ್, ಗಜಮುಖ ಗೆಳೆಯರ ಬಳಗ ಅಧ್ಯಕ್ಷ ಮಂಜು ಇದ್ದರು.

ಕೆ.ಬಿ. ವಿನು ಕಾರ್ಯಕ್ರಮ ನಿರ್ವಹಿಸಿದರು. ರುದ್ರಪ್ಪ ಪ್ರಾರ್ಥಿಸಿ, ಚನ್ನನಾಯಕ ಸ್ವಾಗತಿಸಿ, ಚಂದನ ಮಂಜುನಾಥ್ ನಿರೂಪಿಸಿ, ವಂದಿಸಿದರು. ಗೌರಿ ಗಣೇಶೋತ್ಸವ ಅಂಗವಾಗಿ ಸ್ಥಳೀಯ ನಾಟ್ಯ ಸಂಕಲ್ಪ ನೃತ್ಯ ಸಂಸ್ಥೆ, ಸುವೃತ ನಾಟ್ಯಾಲಯ ಹಾಗೂ ಸೈಕ್ಲೋನ್ ತಂಡದ ಮಕ್ಕಳಿಂದ ನೃತ್ಯ ಹಾಗೂ ಕಾವೇರಿ ಕಲಾಸಿರಿ ತಂಡದಿAದ ನಡೆದ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. -ಚಿತ್ರ ವರದಿ : ಚನ್ನನಾಯಕ ಪೊನ್ನಂಪೇಟೆ ಬಳಿಯ ಕಿರುಗೂರು ಶ್ರೀ ವಿನಾಯಕ ಬಳಗದ ವತಿಯಿಂದ ಪ್ರಥಮ ಬಾರಿಗೆ ಕಿರುಗೂರು ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ ಗಣೇಶ ಮೂರ್ತಿಯ ವಿಸರ್ಜನೋತ್ಸವ ವಿಜೃಂಭಣೆಯಿAದ ನಡೆಯಿತು. ಶ್ರೀ ಮಹದೇಶ್ವರ ದೇವಸ್ಥಾನದ ಅರ್ಚಕ ಸುದರ್ಶನ್ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಗುರುವಾರ ಸಂಜೆ ಕೊದೇಂಗಡ ಅಖಿಲ್ ಮುಂದಾಳತ್ವದಲ್ಲಿ ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಶ್ರೀ ಗೌರಿ, ಗಣೇಶ ಮೂರ್ತಿಗಳ ಅದ್ಧೂರಿಯ ಮೆರವಣಿಗೆ ನಡೆಯಿತು. ಕಿರುಗೂರು ಮುಖ್ಯ ರಸ್ತೆಯಲ್ಲಿ ಶ್ರೀ ಮಹದೇಶ್ವರ ದೇವಸ್ಥಾನದವರೆಗೂ ಹಾಗೂ ಮತ್ತೂರು ಜಂಕ್ಷನ್‌ವರೆಗೂ ಮೆರವಣಿಗೆ ಸಾಗಿ ಮತ್ತೂರು ಜಂಕ್ಷನ್‌ನಲ್ಲಿರುವ ಅರಳಿಕಟ್ಟೆಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಕಿರುಗೂರಿನ ಚಾಮುಂಡಿ ಕೋಟ ಕೆರೆಯಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಯಿತು.