ಕುಶಾಲನಗರ, ಸೆ. ೨೯: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ರಾಜ್ಯದಲ್ಲಿ ನಡೆದ ಬಂದ್ ಹಿನ್ನೆಲೆಯಲ್ಲಿ ಕುಶಾಲನಗರ - ಕೊಪ್ಪ ಗಡಿ ಭಾಗದಲ್ಲಿ ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ ಕೃಷ್ಣ ಮತ್ತು ಪಿರಿಯಾಪಟ್ಟಣ ತಾಲೂಕು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ನೇತೃತ್ವದಲ್ಲಿ ಕೆಲವು ಕಾರ್ಯಕರ್ತರು ಅರೆಬೆತ್ತಲೆ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಯಿತು. ಕಾವೇರಿ ನದಿಗೆ ಧುಮುಕಲು ಪ್ರಯತ್ನಿಸಿದಾಗ ಕುಶಾಲನಗರ ಮತ್ತು ಬೈಲುಕೊಪ್ಪೆ ಪೊಲೀಸರು ತಡೆಯುವಲ್ಲಿ ಯಶಸ್ವಿಯಾದರು.
ಕುಶಾಲನಗರ ಪಟ್ಟಣದಲ್ಲಿ ನಗರ ಬಿಜೆಪಿ ಕಾರ್ಯಕರ್ತರು ನಗರಾಧ್ಯಕ್ಷ ಉಮಾಶಂಕರ್ ನೇತೃತ್ವದಲ್ಲಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿ ಗಣಪತಿ ದೇವಾಲಯ ಮುಂಭಾಗ ಸೇರಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತ
ವಿರೋಧಿ ಸರ್ಕಾರ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಉಮಾಶಂಕರ್ ಒತ್ತಾಯಿಸಿದರು. ಎರಡು ರಾಜ್ಯಗಳ ನಡುವೆ ನೀರು ಹಂಚಿಕೆ ವಿಷಯದಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಪುರಸಭೆ ಸದಸ್ಯರಾದ ಅಮೃತರಾಜ್ ಆರೋಪಿಸಿದರು.
ಬಿಜೆಪಿ ಪ್ರಮುಖರಾದ ಎಂ.ಎನ್. ಕುಮಾರಪ್ಪ , ಕೆ.ಜಿ. ಮನು, ಎಂ.ಎA. ಚರಣ್, ಪುರಸಭೆ ಸದಸ್ಯರಾದ ಜಯವರ್ಧನ್, ರೂಪ ಉಮಾಶಂಕರ್, ನವನೀತ್, ಮಂಜುನಾಥ್ ಮತ್ತಿತರರು ಇದ್ದರು.(ಮೊದಲ ಪುಟದಿಂದ)
ಬಿಗಿ ಭದ್ರತೆ
ಕರ್ನಾಟಕ ರಾಜ್ಯ ಬಂದ್ ಕರೆ ಹಿನ್ನೆಲೆಯಲ್ಲಿ ಕುಶಾಲನಗರ -ಕೊಪ್ಪ ಗಡಿ ಭಾಗದ ಕಾವೇರಿ ನದಿ ಬದಿಯಲ್ಲಿ ಸುಮಾರು ೪೦ಕ್ಕೂ ಅಧಿಕ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದರು.
ಕರ್ನಾಟಕ ಕಾವಲು ಪಡೆಯ ಕೊಡಗು ಜಿಲ್ಲಾ ಘಟಕ ಮತ್ತು ಪಿರಿಯಾಪಟ್ಟಣ ತಾಲೂಕು ಕಾವಲು ಪಡೆ ಘಟಕದ ವತಿಯಿಂದ ನದಿಗೆ ಇಳಿದು ಪ್ರತಿಭಟನೆ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷ ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ನದಿಗೆ ಧುಮುಕಿ ಪ್ರತಿಭಟಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ೯ ಗಂಟೆಯಿAದಲೇ ಬೈಲುಕೊಪ್ಪ ಪೊಲೀಸ್ ಠಾಣಾಧಿಕಾರಿ ಅಜಯ್ ಕುಮಾರ್ ನೇತೃತ್ವದಲ್ಲಿ ೨೫ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಮತ್ತು ಕುಶಾಲನಗರ ಪಟ್ಟಣ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ಹತ್ತಕ್ಕೂ ಅಧಿಕ ಸಿಬ್ಬಂದಿ, ಗುಪ್ತಚರ ಇಲಾಖೆ ಸಿಬ್ಬಂದಿಗಳು ಸೇರಿದಂತೆ ೪೦ಕ್ಕೂ ಅಧಿಕ ಪೊಲೀಸರು ಪ್ರತಿಭಟನೆಯ ಸಿದ್ಧತೆಯಲ್ಲಿ ಇದ್ದ ೧೦ ಮಂದಿ ಪ್ರತಿಭಟನಾಕಾರರನ್ನು ನದಿ ಕಡೆಗೆ ತೆರಳದಂತೆ ತಡೆದರು.