ಐಗೂರು, ಸೆ. ೨೯: ಹೊಸ ತೋಟ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಹರದೂರು ಗ್ರಾ.ಪಂ. ಉಪಾಧ್ಯಕ್ಷ ಸಲೀಂ ಹೊಸತೋಟ, ಪೌಷ್ಟಿಕ ಆಹಾರ ಸೇವನೆಯಿಂದ ಮಾತ್ರ ಸಧೃಡ ಆರೋಗ್ಯ ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಕುಟುಂಬಗಳಲ್ಲಿನ ಆರೋಗ್ಯ ಪದ್ಧತಿಯಲ್ಲಿ ತರಕಾರಿಯಂತ ಪೌಷ್ಟಿಕ ಆಹಾರ ಸೇವನೆ ಮಾಡಬೇಕೆಂದು ತಿಳಿಸಿದರು. ಪ್ರಾಸ್ತಾವಿಕ ಮಾತನಾಡಿದ ಆರೋಗ್ಯ ನಿರೀಕ್ಷಕಿ ಗ್ರೀಷ್ಮಾ, ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿ ಗರ್ಭಿಣಿಯರು ತಮ್ಮ ಮಗುವಿನ ಆರೋಗ್ಯಕ್ಕೆ ಉತ್ತಮ ಪೌಷ್ಟಿಕಾಂಶ ಆಹಾರ ಪದ್ಧತಿ ಅಳವಡಿಸಲು ತಿಳಿಸಿದರು. ಸರಕಾರದಿಂದ ಗರ್ಭಿಣಿಯರಿಗೆ, ಮಕ್ಕಳಿಗೆ ಸಿಗುವ ಸವಲತ್ತುಗಳ ಮಾಹಿತಿಯನ್ನು ಅಂಗನವಾಡಿ ಶಿಕ್ಷಕಿ ಅಸ್ಮಾ ತಿಳಿಸಿದರು. ಪೋಷಣ್ ಕಾರ್ಯಕ್ರಮಕ್ಕೆ ಹಾಜರಾದ ಮಕ್ಕಳ ತೂಕ, ಬೆಳವಣಿಗೆಗಳ ಮಾಹಿತಿ ಪಡೆದು ಬಹುಮಾನ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಸೀಲಾ, ಅಂಗನವಾಡಿ ಶಿಕ್ಷಕಿಯರಾದ ಚಂದನ, ನೇತ್ರಾ, ಆಶಾಕಾರ್ಯಕರ್ತೆ ಚಿತ್ರಾ, ಪೋಷಕರು ಉಪಸ್ಥಿತರಿದ್ದರು. ದೇವಕಿ ಪ್ರಾರ್ಥಿಸಿದರು.