ಮುಳ್ಳೂರು,ಸೆ. ೨೯: ವೀರಶೈವ ಸಂಘಟನಾ ವೇದಿಕೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ವೀರಭದ್ರೇಶ್ವರ ಸ್ವಾಮಿ ಜನ್ಮ ವರ್ದಂತಿ ಮಹೋತ್ಸವವನ್ನು ಅ. ೧ ರಂದು (ನಾಳೆ) ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ವಿವಿಧ ಕಡೆಗಳಲ್ಲಿ ಬಿಲ್ವಪತ್ರೆ ಮತ್ತು ರುದ್ರಾಕ್ಷಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೀರಶೈವ ಜಿಲ್ಲಾ ಸಂಘಟನಾ ವೇದಿಕೆಯ ಮಹಾ ಪೋಷಕರು ಮತ್ತು ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ಶನಿವಾರಸಂತೆ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ ವೀರಭದ್ರೇಶ್ವರ ಸ್ವಾಮಿ ಜಯಂತಿ ಯನ್ನು ಕಳೆದ ೫ ವರ್ಷಗಳಿಂದ ನಿರಂತರವಾಗಿ ಕೊಡಗು ಜಿಲ್ಲೆಯಲ್ಲೂ ವೀರಶೈವ ಸಂಘಟನಾ ವೇದಿಕೆ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ಮೂಲಕ ಜಿಲ್ಲೆಯ ಭಕ್ತರಿಗೆ ವೀರಭದ್ರೇಶ್ವರ ಸ್ವಾಮಿಯ ಶಕ್ತಿಯನ್ನು ಪರಿಚಯಿಸಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದು ಅ. ೧ ರಂದು ಸ್ವಾಮಿಯ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಘಟನಾ ವೇದಿಕೆ ಸಿದ್ಧತೆ ನಡೆಸಿದೆ ಎಂದರು.

ವೀರಶೈವ ಸಂಘಟನಾ ವೇದಿಕೆ ಗೌರವ ಅಧ್ಯಕ್ಷ ಮತ್ತು ಮನೆಹಳ್ಳಿ ಮಠಾದೀಶ ಶ್ರೀ ವiಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಶನಿವಾರ ಸಂತೆ, ಕೊಡ್ಲಿಪೇಟೆ, ಸೋಮವಾರ ಪೇಟೆ ಭಾಗದಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಗಳಿಗೆ ವೀರಶೈವ ಸಂಘಟನಾ ವೇದಿಕೆ ಪದಾಧಿಕಾರಿಗಳು ಹೋಬಳಿಯ ಸ್ವಾಮೀಜಿಗಳು, ಭಕ್ತರು ಒಳಗೂಡಿ ಭೇಟಿಕೊಟ್ಟು ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ. ಅದೇ ರೀತಿಯಲ್ಲಿ ಅ. ೧ ರಂದು ಸ್ವಾಮಿಯ ಜಯಂತಿಯನ್ನು ಪ್ರತಿವರ್ಷದಂತೆಯೆ ನಡೆಸಲಾಗುತ್ತಿದ್ದು, ಅಂದು ಸಂಜೆ ೫ ಗಂಟೆಗೆ ಶ್ರೀಕ್ಷೇತ್ರ ತಪೋವನ ಮನೆಹಳ್ಳಿ ಮಠದಲ್ಲಿ ಸಮಾರೋಪ ಸಮಾರಂಭವು ನಡೆಯಲಿದೆ ಎಂದರು.

ವೀರಶೈವ ಸಂಘ ಟನಾ ವೇದಿಕೆ ರಾಜ್ಯ ಕಾರ್ಯದರ್ಶಿ ಎಸ್. ಮಹೇಶ್ ಮಾತ ನಾಡಿ, ಅ. ೧ ರಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಮನೆಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ವೀರಭದ್ರ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕಾರ್ಯ ನಡೆಯುತ್ತದೆ, ಬೆಳಿಗ್ಗೆ ೮ ಗಂಟೆಗೆ ನೀರುಗುಂದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಲಾಗು ವುದು. ನಂತರ ಬೆಳಿಗ್ಗೆ ೧೦ ಕ್ಕೆ ಕಿರಿಕೊಡ್ಲಿ, ೧೧ ಗಂಟೆಗೆ ಕೊಡ್ಲಿಪೇಟೆ ಅಪರಾಹ್ನ ೧೨ ಕ್ಕೆ ಚೌಡೇನಳ್ಳಿ, ೧೨.೪೫ಕ್ಕೆ ಶಿಡಿಗಳಲೆ, ಗೌಡಳ್ಳಿ, ಕೋಟೆಯೂರು, ನೇಗಳೆ ಗ್ರಾಮ ಗಳಲ್ಲಿರುವ ವೀರಭದ್ರೇಶ್ವರ ದೇವಸ್ಥಾನ ಮತ್ತು ಸಂಜೆ ೫ ಗಂಟೆಗೆ ಶ್ಯಾನಬೋಗನಹಳ್ಳಿ ಗ್ರಾಮದ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜಾ ಕೈಂಕರ್ಯಗಳನ್ನು ನಡೆಸಲಾಗುವುದು ಸಂಜೆ ೬.೩೦ ರಿಂದ ತಪೋವನ, ಮನೆಹಳ್ಳಿ ಮಠದಲ್ಲಿ ದೇವರ ಉತ್ಸವ ನಡೆಸಲಾಗುತ್ತದೆ ಎಂದರು.

ಗೋಷ್ಠಿಯಲ್ಲಿ ವೀರಶೈವ ಸಂಘಟನಾ ವೇದಿಕೆಯ ವಿವಿಧ ಘಟಕದ ಪದಾಧಿಕಾರಿಗಳಾದ ಎಚ್.ಎಂ.ದಿವಾಕರ್, ಸಿ.ವಿ. ಶಂಭುಲಿAಗಪ್ಪ, ಸಿ.ಬಿ.ಪ್ರಸನ್ನ, ಡಿ.ಎಸ್.ಮಹೇಶ್, ದಯಾನಂದ್, ಎಂ.ಎA.ಪ್ರಕಾಶ್ ಪ್ರಮುಖರಾದ ಡಿ.ಬಿ.ಸೋಮಪ್ಪ ಹಾಜರಿದ್ದರು.