ಗೋಣಿಕೊಪ್ಪಲು, ಸೆ.೨೯ : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಹಿನ್ನೆಲೆ ಗೋಣಿಕೊಪ್ಪ ನಗರದಲ್ಲಿ ಕೊಡಗು ಜಿಲ್ಲಾ ರೈತ ಸಂಘದ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಮುಂದಾಳತ್ವದಲ್ಲಿ ರೈತರು ಪಟ್ಟಣದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ತಮ್ಮ ಅಸಮಧಾನವನ್ನು ಹೊರಹಾಕಿದರು.
ಜಿಲ್ಲಾ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ ನದಿಯಲ್ಲಿ ನೀರು ಇಲ್ಲದಿದ್ದರೂ ತಮಿಳುನಾಡು ಸರ್ಕಾರ ನೀರು ಬಿಡುವಂತೆ ಒತ್ತಾಯಿಸುತ್ತಿದೆ. ಯಾವುದೇ ಕಾರಣಕ್ಕೂ ಕರ್ನಾಟಕ ಸರ್ಕಾರ ನೀರು ಬಿಡುವ ನಿರ್ಧಾರ ಕೈಗೊಳ್ಳಬಾರದು, ಕೊಡಗಿನ ಜನರು ಇಂತಹ ಹೋರಾಟಕ್ಕೆ ಸ್ವಯಂ ಪ್ರೇರಿತ ವಾಗಿ ಕೈ ಜೋಡಿಸಬೇಕು ಈ ನಾಡಿನ ಜಲವನ್ನು ಉಳಿಸುವ ಕೆಲಸ ಎಲ್ಲ ರಿಂದಲೂ ಆಗಬೇಕಾಗಿದೆ ಎಂದರು.
ಪ್ರತಿಭಟನೆಯಲ್ಲಿ ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ, ತಿತಿಮತಿ ಮುಖಂಡರಾದ ಚೆಪ್ಪುಡೀರ ಕಾರ್ಯಪ್ಪ, ಮಾಯಮುಡಿ ಸಂಚಾಲಕರಾದ ಪುಚ್ಚಿಮಾಡ ರಾಯ್ ಮಾದಪ್ಪ, ಜಿಲ್ಲಾ ಖಜಾಂಜಿ ಇಟ್ಟಿರ ಸಭಿತ ಭೀಮಯ್ಯ, ಪೊನ್ನಂಪೇಟೆ ಸಂಚಾಲಕ ಚೊಟ್ಟೆಕಾಳಪಂಡ ಮನು, ನಲ್ಲೂರಿನ ತೀತರಮಾಡ ರಾಜ, ಬಾಳೆಲೆಯ ತಾಣಚ್ಚಿರ ಲೆಹರ್ ಬಿದ್ದಪ್ಪ ಸೇರಿದಂತೆ ಅನೇಕ ಪ್ರಮುಖರು ಪಾಲ್ಗೊಂಡಿದ್ದರು. ಗೋಣಿಕೊಪ್ಪ ಠಾಣಾಧಿಕಾರಿ ರೂಪಾದೇವಿ ಬೀರಾದಾರ್ ಬಂದೋಬಸ್ತ್ ಕೈಗೊಂಡಿದ್ದರು. ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಬದಲಿ ಮಾರ್ಗವಾಗಿ ವಾಹನಗಳನ್ನು ಬಿಡಲಾಯಿತು.