ಅನಿಲ್ ಎಚ್.ಟಿ.

ಬೆಂಗಳೂರು, ಸೆ. ೨೮: ವಿಶ್ವ ಕಾಫಿ ಸಮ್ಮೇಳನದಲ್ಲಿ ವಿದೇಶಿಯರೂ ಸೇರಿದಂತೆ ಸಾವಿರಾರು ಪ್ರತಿನಿಧಿಗಳನ್ನು ಗಮನ ಸೆಳೆದ ಪ್ರಮುಖ ತಾಣಗಳಲ್ಲಿ ಕಾಫಿ ವಸ್ತು ಸಂಗ್ರಹಾಲಯ ಕೂಡ ಒಂದು.

ಸಮ್ಮೇಳನಕ್ಕಾಗಿ ಅರಮನೆ ಮೈದಾನದಲ್ಲಿ ಗೋಳಾಕಾರದಲ್ಲಿ ಕಾಫಿಯ ಇತಿಹಾಸ ಬಿಂಬಿಸುವ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾಫಿಯ ಇತಿಹಾಸ ಬಿಂಬಿಸುವ ಈ ಪ್ರದರ್ಶನ ನಿಜಕ್ಕೂ ದಾಖಲಾರ್ಹವಾಗಿತ್ತಲ್ಲದೇ ಅಪೂರ್ವವೂ ಆಗಿತ್ತು. ಕೊಡಗಿನಲ್ಲಿ ಇಂತಹ ಪರಿಕಲ್ಪನೆ ಜಾರಿ ಯಾವಾಗ ಎಂಬ ಪ್ರಶ್ನೆಯನ್ನೂ ಇದು ಹುಟ್ಟುಹಾಕಿತ್ತು.

ಕಾಫಿ ಕಸಿಯ ಹಂತ ದಿಂದ ಮೊದಲ್ಗೊಂಡು ಸಸಿಯವರೆಗೂ ಪ್ರಥಮ ಹಂತದಲ್ಲಿ ನೈಜ ಗಿಡಗಳ ಮೂಲಕ ಪ್ರದರ್ಶನ ಆಯೋಜಿಸಲಾಗಿತ್ತು. ಮುಂದಿನ ಹಂತದಲ್ಲಿ ಕಾಫಿ ಕಾಯಿ ಹಣ್ಣಾಗುವ ಹಂತ, ಹಣ್ಣಿನ ಸಂಸ್ಕರಣೆ, ಕಾಫಿ ಬೀಜವನ್ನು ಒಣಗಿಸಿ ಪುಡಿ ಮಾಡುವ ವಿಧಾನಗಳ ಪ್ರಾತ್ಯಕ್ಷಿಕೆ ಇತ್ತು.

ನಂತರ ಕಾಫಿ ಪುಡಿಯಿಂದ ಕಾಫಿ ತಯಾರಿಸುವ ಮಾಹಿತಿಯನ್ನೂ ಈ ವಸ್ತು ಸಂಗ್ರಹಾಲಯ ಹೊಂದಿತ್ತು. ಕಾಫಿ ಸಂಸ್ಕರಣೆಗೆ ಬೇಕಾಗುವ ವಿವಿಧ ಉಪಕರಣಗಳನ್ನೂ ಇಲ್ಲಿ ಪ್ರದರ್ಶಿಸಲಾಗಿತ್ತಲ್ಲದೇ, ಯಂತ್ರಗಳ ಲೋಕದಲ್ಲಿ ಕಂಡು ಬಂದಿರುವ ನವೀನತೆಗಳು, ಹೊಸ ಉಪಕರಣಗಳ ಬಗ್ಗೆಯೂ ಪ್ರಾತ್ಯಕ್ಷಿಕೆ ನೀಡಲಾಗಿತ್ತು. ದಕ್ಷಿಣ ಭಾರತದ ಫಿಲ್ಟರ್, ಫ್ರೆಂಚ್ ಪ್ರೆಸ್, ನೋಕಾ ಪಾಟ್, ಏರೋ ಪ್ರೆಸ್, ಹ್ಯಾಂಡ್ ಗ್ರೆöÊಂಡರ್.. ಹೀಗೆ ನಾನಾ ರೀತಿಯ ಯಂತ್ರೋಪಕರಣಗಳು ಇಲ್ಲಿದ್ದವು.

ರೋಬಸ್ಟಾ, ಅರೇಬಿಕಾ ಕಾಫಿ ಗಿಡಗಳನ್ನು ಇಲ್ಲಿ ಇರಿಸಲಾಗಿದ್ದರಿಂದಾಗಿ ಈವರೆಗೆ ಕಾಫಿ ಗಿಡವನ್ನೇ ನೋಡದ ಯುವ ಪೀಳಿಗೆಯವರು, ನಗರ ಪ್ರದೇಶದ ಜನರಿಗೆ ಕಾಫಿ ಗಿಡ ಎಂದರೆ ಹೀಗಿರುತ್ತದೆ ಎಂಬ ತಿಳುವಳಿಕೆ ಬಂದಿತ್ತು. ಇದಕ್ಕೆ ತಕ್ಕಂತೆ, ಹಲವಾರು ಕಾಲೇಜುಗಳ ವಿದ್ಯಾರ್ಥಿಗಳು ಕಾಫಿ ಮ್ಯೂಸಿಯಂಗೆ ಭೇಟಿ ನೀಡಿ ವೀಕ್ಷಿಸಿದರು. ಹೀಗಾಗಿ ಕಾಫಿಯ ಬಗ್ಗೆ ಮಾಹಿತಿ ನೀಡುವ ಕಾಫಿ ಮಂಡಳಿಯ ಉದ್ದೇಶ ಸಾರ್ಥಕಗೊಂಡAತಾಯಿತು.

ಪಶ್ಚಿಮಘಟ್ಟ ಪ್ರದೇಶದ ಕಾಫಿ ಬಗ್ಗೆ ತಿಳುವಳಿಕೆ ನೀಡುವ ಪ್ರಯತ್ನದಲ್ಲಿ ಕಾಡು ಇಲ್ಲದೇ ಇದ್ದರೆ ಹೇಗೆ. ಹೀಗಾಗಿಯೇ ಮ್ಯೂಸಿಯಂನಲ್ಲಿ ಕೃತಕ ಕಾಡನ್ನೂ ರೂಪಿಸಲಾಗಿತ್ತು.

ಈ ದಟ್ಟಾರಣ್ಯದಲ್ಲಿ ಘಟ್ಟಶ್ರೇಣಿಯ ಕಾಡಿನಲ್ಲಿರುವ ವಿವಿಧ ಕಾಡು ಮರಗಳು, ಗಿಡಗಳು ಜತೆಜತೆಗೇ ಕಾಡೆಮ್ಮೆ, ಚಿರತೆ, ಮೊಲ, ಜಿಂಕೆ, ನವಿಲಿನ ಪ್ರತಿಕೃತಿಗಳನ್ನೂ ಇಡಲಾಗಿತ್ತು. ಇದೊಂದು ರೀತಿಯಲ್ಲಿ ನೈಜಕಾಡನ್ನೇ ಅಥವಾ ನಿಜವಾದ ಕಾಫಿ ತೋಟವನ್ನೇ ಸಂದರ್ಶಿಸಿದ ಅನುಭವ ನೀಡಿತ್ತು.

ಈ ಕಾಫಿ ಮ್ಯೂಸಿಯಂನಲ್ಲಿ ಕಾಫಿಯ ಮಹತ್ವ ಸಾರುವ ಮಾಹಿತಿ ಫಲಕಗಳೂ ಗಮನ ಸೆಳೆದವು. ಕಾಫಿ ನಿಮ್ಮ ಹೃದಯವನ್ನು ಆರೋಗ್ಯವಾಗಿ ಮಾತ್ರವಲ್ಲ ಕಿರಿಯ ವಯಸ್ಸಿನವರಂತೆ ಕಾಪಾಡುತ್ತದೆ ಎಂಬ ಫಲಕ, ಕಾಫಿಯು ಸಕ್ಕರೆ ಕಾಯಿಲೆ ಬಾರದಂತೆ ನೋಡಿಕೊಳ್ಳುತ್ತದೆ ಎಂಬ ಆರೋಗ್ಯ ತಿಳುವಳಿಕೆ ಫಲಕ, ಕಾಫಿಯನ್ನು ನಿಮ್ಮ ಆಹಾರದಲ್ಲಿ ಸೇರ್ಪಡೆ ಮಾಡುವ ಮೂಲಕ ಕಾಯಿಲೆಗಳನ್ನೂ ದೂರವಿಡಿ ಎಂಬ ಸಂದೇಶ, ಕಾಫಿಯು ನಿಮ್ಮನ್ನು ಕಿಡ್ನಿ ಸ್ಟೋನ್‌ಗಳಿಂದ ದೂರವಿಡುತ್ತದೆ ಎಂಬ ಜಾಗೃತಿ, ವಜ್ರಗಳು ಯುವತಿಯರ ನೆಚ್ಚಿನ ಗೆಳೆಯ ಹೇಗೋ.. ಕಾಫಿಯು ಕೂಡ ದೊಡ್ಡ ಕಲ್ಲುಗಳನ್ನು ಕರಗಿಸುವ ಮೂಲಕ ನಿಮ್ಮ ಸಂಗಾತಿಯಾಗುತ್ತದೆ ಎಂಬ ತಣ್ಣಗಿನ ಪ್ರೇಮ ಸಂದೇಶ, ಕಾಫಿಯಿಂದ ದಿನವನ್ನು ಪ್ರಾರಂಭಿಸಿ ಎಂಬೆಲ್ಲಾ ವಿಭಿನ್ನ ಸಂದೇಶಗಳು ಕಾಫಿ ಮ್ಯೂಸಿಯಂನಲ್ಲಿ ರಾರಾಜಿಸಿದ್ದವು.

ಸುಮಾರು ೨ ತಿಂಗಳ ಪ್ರಯತ್ನದ ಫಲವಾಗಿ ಈ ಮ್ಯೂಸಿಯಂ ರೂಪುಗೊಂಡಿದೆ. ಈ ಮೂಲಕ ಲಕ್ಷಾಂತರ ವೀಕ್ಷಕರಿಗೆ ಕಾಫಿ ನಾಡಿನ ಮಹತ್ವದ ಬೆಳೆಯಾದ ಕಾಫಿಯ ಬಗ್ಗೆ ಮಾಹಿತಿ ನೀಡುವ ಮತ್ತು ಕಾಫಿಯ ಮಹತ್ವ ತಿಳಿಸುವ ಪ್ರಯತ್ನದಲ್ಲಿ ಕಾಫಿ ಮಂಡಳಿ ಯಶಸ್ವಿಯಾಗಿದೆ ಎಂದು ಕಾಫಿ ಮಂಡಳಿ ಕಾರ್ಯದರ್ಶಿ ಡಾ. ಜಗದೀಶ್ ‘ಶಕ್ತಿ’ಗೆ ತಿಳಿಸಿದರು.

ಕೊಡಗಿನಲ್ಲಿ ಯಾಕಿಲ್ಲ ಕಾಫಿ ಮ್ಯೂಸಿಯಂ...?

ಕಾಫಿಯನ್ನೇ ಬೆಳೆಯದ ಐ.ಟಿ. ಸಿಟಿ ಎಂಬ ಹೆಗ್ಗಳಿಕೆಯ ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ರೂಪಿಸಲ್ಪಟ್ಟ ಕಾಫಿ ಮ್ಯೂಸಿಯಂ ಈ ರೀತಿಯಲ್ಲಿ ಜನಮನ್ನಣೆಗಳಿಸಿದ ಹಿನ್ನೆಲೆಯಲ್ಲಿ ಗಮನಿಸುವುದಾದರೆ, ಕಾಫಿ ಜಿಲ್ಲೆ ಎಂಬ ಖ್ಯಾತಿಗಳಿಸಿದ ಕೊಡಗಿನಲ್ಲಿ ಇಂತಹ ಮ್ಯೂಸಿಯಂ ಯಾಕೆ ಇಲ್ಲ ಎಂಬ ಪ್ರಶ್ನೆ ಕಾಡದಿರದು.

ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರದಲ್ಲಿ ಇಂತಹ ಕಾಫಿ ವಸ್ತು ಸಂಗ್ರಹಾಲಯ ರೂಪಿಸುವ ಸಲಹೆಗಳು, ಪ್ರಸ್ತಾವನೆಗಳು ಅನೇಕ ವರ್ಷಗಳಿಂದ ಕೇಳುತ್ತಿದೆ. ಪ್ರತಿವರ್ಷ ಅಕ್ಟೋಬರ್ ೧ ರಂದು ವಿಶ್ವ ಕಾಫಿ ದಿನಾಚರಣೆ ಸಂದರ್ಭ ಚೆಟ್ಟಳ್ಳಿಯಲ್ಲಿ ಕಾಫಿ ಮ್ಯೂಸಿಯಂ ಬಗ್ಗೆ ಮಾತು ಕೇಳಿಬರುತ್ತದೆಯಾದರೂ ಆ ದಿನ ಮುಗಿದ ನಂತರ ಮತ್ತೆ ಈ ಬಗ್ಗೆ ಪ್ರಸ್ತಾಪವೇ ಇರುವುದಿಲ್ಲ.

ಚೆಟ್ಟಳ್ಳಿಯೇ ಆಗಬೇಕೆಂದಿಲ್ಲ. ಮಡಿಕೇರಿ ರಾಜಾಸೀಟ್ ಬಳಿಯಲ್ಲಿರುವ ಕೂರ್ಗ್ ವಿಲೇಜ್‌ನಲ್ಲಿ ಕಾಫಿ ಮ್ಯೂಸಿಯಂ ಅನ್ನು ರೂಪಿಸಿದ್ದೇ ಆದಲ್ಲಿ ಅತ್ಯಧಿಕ ವೀಕ್ಷಕರು ಇಲ್ಲಿಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಈ ಮೂಲಕ ಕಾಫಿಯ ಮಾಹಿತಿ ಲಕ್ಷಾಂತರ ಪ್ರವಾಸಿಗರನ್ನು ತಲುಪಲು ಸುಲಭ ಸಾಧ್ಯವಾಗಲಿದೆ. ಗೋಳಾಕಾರದಲ್ಲಿ ಮ್ಯೂಸಿಯಂ ನಿರ್ಮಿಸಿದ್ದೇ ಆದಲ್ಲಿ ಕಡಿಮೆ ಸ್ಥಳದಲ್ಲಿ ಖಂಡಿತ ಈ ಯೋಜನೆ ಜಾರಿ ಸಾಧ್ಯವಾಗುತ್ತದೆ.

ಕೊಡಗಿನ ಸಂಸದರು, ಶಾಸಕರು, ಜಿಲ್ಲಾಡಳಿತ, ಕಾಫಿ ಮಂಡಳಿ ಸಹಯೋಗದಲ್ಲಿ, ಈ ನಿಟ್ಟಿನಲ್ಲಿ ಪ್ರಯತ್ನಿಸಿದ್ದೇ ಆದಲ್ಲಿ ಖಂಡಿತಾ ಕಾಫಿ ವಿಚಾರದ ಮಾಹಿತಿ ನೀಡಬಲ್ಲ ಅಪೂರ್ವ ಮ್ಯೂಸಿಯಂ ಜನಮನ ಸೆಳೆಯಲು ಸಾಧ್ಯವಾಗುತ್ತದೆ.

ಬೆಂಗಳೂರಿನಲ್ಲಿ ಯಶಸ್ವಿಯಾದ ಪರಿಕಲ್ಪನೆಯೊಂದು ಕಾಫಿ ನಾಡಾದ ಕೊಡಗಿನ ಕೇಂದ್ರ ಸ್ಥಾನ ಮಡಿಕೇರಿಯಲ್ಲಿಯೂ ಸಾಧ್ಯವಾಗುವ ಮೂಲಕ ಇತಿಹಾಸ ಸೃಷ್ಟಿಸಲಿ ಎಂಬುದೇ ಸದ್ಯದ ಆಶಯ.