ಮಡಿಕೇರಿ, ಸೆ. ೨೯: ರಾಜ್ಯ ಸರಕಾರದ ೨೦೨೩-೨೪ನೇ ಸಾಲಿನ ಬರಪೀಡಿತ ಜಿಲ್ಲೆಗಳ ಪಟ್ಟಿಯಲ್ಲಿ ಪೊನ್ನಂಪೇಟೆ ತಾಲೂಕನ್ನು ಕೈಬಿಟ್ಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕ ಪೊನ್ನಂಪೇಟೆಯನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಸರಕಾರದ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದೆ.

ಕರ್ನಾಟಕ ರಾಜ್ಯ ರೈತ ಸಂಘದ ಗೋಣಿಕೊಪ್ಪಲಿನ ಜಿಲ್ಲಾ ಕಚೇರಿಯಲ್ಲಿ ಜಿಲ್ಲೆಯ ರೈತರು ಎದರಿಸುತ್ತಿರುವ ಸಂಕಷ್ಟಗಳ ಬಗ್ಗೆ ನಡೆದ ಸಭೆಯಲ್ಲಿ ಪೊನ್ನಂಪೇಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂಬ ಆಗ್ರಹ ಕೇಳಿಬರುವುದ ರೊಂದಿಗೆ ಹೋರಾಟ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು, ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಪೊನ್ನಂಪೇಟೆ ತಾಲೂಕನ್ನು ಕೈಬಿಟ್ಟಿರುವ ಬಗ್ಗೆ ಸಂಬAಧಿಸಿದ ಅಧಿಕಾರಿಗಳ ಬಳಿ ಕೇಳಿದಾಗ ಬರಪೀಡಿತ ಪ್ರದೇಶಗಳ ಪಟ್ಟಿಯನ್ನು ಸರಕಾರವೇ ನೇರವಾಗಿ ಬಿಡುಗಡೆಗೊಳಿಸಿದೆ ಎಂಬ ಮಾಹಿತಿ ದೊರೆತಿದೆ.

ಕ್ಷೇತ್ರದ ಶಾಸಕರು ಈ ಬಗ್ಗೆ ಜವಾಬ್ದಾರಿಯನ್ನು ತೆಗೆದುಕೊಂಡು ಪಟ್ಟಿಯಲ್ಲಿ ಪೊನ್ನಂಪೇಟೆ ತಾಲೂಕನ್ನು ಸೇರ್ಪಡೆಗೊಳಿಸಬಹುದಿತ್ತು. ಪೊನ್ನಂಪೇಟೆ ತಾಲೂಕಿನಲ್ಲಿ ಮುಂಗಾರು ಮಳೆ ಶೇ. ೫೦ ರಷ್ಟು ಕೊರತೆಯಾಗಿದೆ. ರೈತರು ಡಿಸೇಲ್ ಪಂಪ್‌ಸೆಟ್‌ಗಳ ಮೂಲಕ ಬೆಳೆಗಳಿಗೆ ನೀರು ಹಾಯಿಸುತ್ತಿದ್ದು, ೨೦೧೮ ರಿಂದ ಇಲ್ಲಿಯವರೆಗೂ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಬೆಳೆ ನಷ್ಟದಿಂದ ಬವಣೆ ಪಡುವಂತಾಗಿದೆ. ಅಳಿದುಳಿದ ಬೆಳೆ ಕಾಡು ಪ್ರಾಣಿಗಳ ಹಾವಳಿಗೆ ತುತ್ತಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಪೊನ್ನಂಪೇಟೆ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡುವಂತೆ ಒತ್ತಾಯಿಸಿದರು.

ಅನಾವೃಷ್ಟಿಯಿಂದ ಕಾಫಿ ಕಾಳುಮೆಣಸು ಭತ್ತ, ಅಡಿಕೆ, ಇನಿತರ ಬೆಳೆಗಳಿಗೆ ಅಪಾರ ಹಾನಿ ಸಂಭವಿಸಿದೆ ಕಾಫಿ ಬೆಳೆಗಾರರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಭತ್ತದ ಬೆಳೆಗೆ ನೀಡುವ ಪರಿಹಾರದಂತೆ ಕಾಫಿ ಬೆಳೆಗಾರರಿಗೂ ಪರಿಹಾರ ನೀಡು ವಂತಾಗಬೇಕು. ಈ ಬಗ್ಗೆ ತೋಟ ಗಾರಿಕಾ ಇಲಾಖೆ, ಕಾಫಿ ಮಂಡಳಿ ಹಾಗೂ ಸಂಬಾರ ಮಂಡಳಿಗಳು ಜತೆಗೂಡಿ ರೈತರಿಗಾದ ಬೆಳೆ ನಷ್ಟ ಪರಿಹಾರವನ್ನು ನೀಡಬೇಕು ಅಲ್ಲದೇ, ಎನ್‌ಡಿಆರ್‌ಎಫ್ ವತಿಯಿಂದ ಈ ಹಿಂದೆ ಎಕರೆಗೆ ನೀಡಲಾಗುತ್ತಿದ್ದ ಪರಿಹಾರವನ್ನು ಈಗಲೂ ಮುಂದು ವರೆಸಿಕೊಂಡು ಬರಲಾಗುತ್ತಿದೆ.

ಆದರೆ ಈ ಪರಿಹಾರ ತುಂಬಾ ಕಡಿಮೆ ಯಾಗಿದ್ದು, ಎಕರೆಗೆ ನೀಡಲಾಗುವ ಪರಿಹಾರದ ಮೊತ್ತವನ್ನು ಏರಿಕೆ ಮಾಡಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಕೇಂದ್ರ ಸರಕಾರದೊಂದಿಗೆ ವ್ಯವಹರಿಸಿ ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಶಾಸಕರು ಹಾಗೂ ಜಿಲ್ಲಾಧಿಕಾರಿ, ತಹಶೀಲ್ದಾರ್‌ರನ್ನು ಭೇಟಿ ಮಾಡಿ ಈ ಬಗ್ಗೆ ಮನವರಿಕೆ ಮಾಡಿಕೊಡುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಪ್ರಧಾನ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಅಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಸು ದೇವಯ್ಯ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪAಡ ಪ್ರವೀಣ್, ಮಾಯಮುಡಿ ಗ್ರಾಮದ ಸಂಚಾಲಕ ಪುಚ್ಚಿಮಾಡ ರಾಯ್ ಮಾದಪ್ಪ, ರೈತ ಸಂಘದ ಹಿರಿಯ ಮುಖಂಡರಾದ ಚೆಕ್ಕೇರ ಕಾಳಯ್ಯ, ನಲ್ಲೂರು ಗ್ರಾಮದ ಸಂಚಾಲಕ ತೀತರಮಾಡ ರಾಜ ಕರುಂಬಯ್ಯ, ಮಲಚೀರ ಗಿರೀಶ್, ಪುಚ್ಚಿಮಾಡ ಸಂತೋಷ, ವಿ.ಎಲ್. ಗಣೇಶ್, ಮಿದೇರೀರ ಕವಿತ ಹಾಗೂ ಮತ್ತಿತರರು ಉಪಸ್ಥಿತರಿದ್ದರು.