(ವಾಸು ಎ.ಎನ್.)
ಸಿದ್ದಾಪುರ, ಸೆ. ೨೯ : ನೆಲ್ಯಹುದಿಕೇರಿ, ಸಿದ್ದಾಪುರ, ಮಾಲ್ದಾರೆ, ಇಂಜಿಲಗೆರೆ, ಕರಡಿಗೋಡು ಗ್ರಾಮಗಳ ವ್ಯಾಪ್ತಿಯಲ್ಲಿ ಮಿತಿ ಮೀರಿರುವ ಮಂಗಗಳ ಕಾಟದಿಂದ ಸಾರ್ವಜನಿಕರು ಹಾಗೂ ಕೃಷಿಕರು ಕಂಗಾಲಾಗಿದ್ದಾರೆ.
ನೆಲ್ಯಹುದಿಕೇರಿ, ಮಾಲ್ದಾರೆ, ಸಿದ್ದಾಪುರ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕೃಷಿಕರು ಬೆಳೆದ ಬೆಳೆಗಳಾದ ಕಾಫಿ, ಕಾಳುಮೆಣಸು, ಪಪ್ಪಾಯಿ, ಕಿತ್ತಳೆ ಇನ್ನಿತರ ಬೆಳೆಗಳು ಮಂಗಗಳ ಆಹಾರವಾಗುತ್ತಿದೆ. ಒಂದೇ ಬಾರಿಗೆ ೫೦ ರಿಂದ ೬೦ ಮಂಗಗಳು ತೋಟಕ್ಕೆ ಲಗ್ಗೆ ಇಡುತ್ತಿದ್ದು ಗಿಡದಿಂದ ಗಿಡಕ್ಕೆ ಹಾರುವ ಸಂದರ್ಭ ಗಿಡಗಳ ಕೊಂಬೆಗಳು ಮುರಿಯುವುದಲ್ಲದೆ ಫಸಲುಗಳು ನಾಶವಾಗುತ್ತಿರುವುದಾಗಿ ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.
ಮನೆಗಳಿಗೆ ಹಾನಿ ಮಾಡುತ್ತಿರುವ ಮಂಗಗಳು : ವಾನರರು ಕೇವಲ ಕೃಷಿಕರಿಗೆ ಮಾತ್ರ ತಲೆನೋವಾಗಿ ಪರಿಣಮಿಸದೆ ವ್ಯಾಪ್ತಿಯ ಮನೆಗಳಿಗೆ ಕೂಡ ಹಾನಿ ಮಾಡುತ್ತಿರುವುದು ಕಂಡುಬರುತ್ತಿದೆ.
(ಮೊದಲ ಪುಟದಿಂದ) ಮನೆಗಳ ಮೇಲ್ಛಾವಣಿ ತೆಗೆದು ಒಳನುಗ್ಗುವ ಮಂಗಗಳು ಆಹಾರ ಸಾಮಗ್ರಿಗಳನ್ನು ತಿಂದು ಮನೆಯ ಇತರ ಸಾಮಗ್ರಿಗಳಿಗೆ ಹಾನಿ ಮಾಡುತ್ತಿರುವುದು ಕಂಡುಬರುತ್ತಿದೆ. ಮಂಗಗಳ ಹಾವಳಿಯಿಂದ ವ್ಯಾಪ್ತಿಯ ನಿವಾಸಿಗಳು ಕಂಗಾಲಾಗಿದ್ದು ಮನೆ ಸಾಮಗ್ರಿಗಳನ್ನು ಸಂರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಮಂಗಗಳು ತೋಟ, ಗದ್ದೆಗಳಿಗೆ ಲಗ್ಗೆ ಇಡುತ್ತಿದ್ದು, ಮನುಷ್ಯರ ಭಯವೇ ಇಲ್ಲದಂತೆ ಮನೆಯೊಳಗೆ ನುಗ್ಗಲಾರಂಭಿಸಿವೆ.
ಇತ್ತೀಚೆಗೆ ಮಂಗಗಳ ಗುಂಪೊAದು ಮನೆಯ ಎದುರು ಒಣಗಲು ಹಾಕಿದ್ದ ಬಟ್ಟೆಗಳನ್ನು ಹೊತ್ತೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಅರಣ್ಯ ಇಲಾಖೆಯೊಂದಿಗಿನ ಸಭೆ ವ್ಯರ್ಥ
ವ್ಯಾಪ್ತಿಯಲ್ಲಿ ಮಂಗಗಳ ಹಾವಳಿಯನ್ನು ತಡೆಗಟ್ಟಲು ಒತ್ತಾಯಿಸಿ ಕೃಷಿಕರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಕೃಷಿಕರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ಹಂಚಿಕೊAಡಿದ್ದರು. ಅಲ್ಲದೆ ಮಂಗಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು. ಆದರೆ ಸಭೆಯು ಕೇವಲ ಮಾತಿಗೆ ಸೀಮಿತವಾಗಿತ್ತೆ ಹೊರತು ಸಮಸ್ಯೆ ಇತ್ಯರ್ಥಕ್ಕೆ ಅರಣ್ಯ ಇಲಾಖೆಯು ಕ್ರಮ ಕೈಗೊಳ್ಳಲು ವಿಫಲವಾಗಿದೆ.
ವಿವಿಧ ಪ್ರಯೋಗಗಳು
ಮಿತಿ ಮೀರಿದ ಮಂಗಗಳ ಹಾವಳಿಗೆ ಅರಣ್ಯ ಇಲಾಖೆಯು ಯಾವುದೇ ಕ್ರಮ ಕೈಗೊಳ್ಳದೇ ಇರುವ ಹಿನ್ನೆಲೆಯಲ್ಲಿ ರೈತರು ತಮ್ಮ ಬೆಳೆಗಳನ್ನು ಸಂರಕ್ಷಿಸುವ ಸಲುವಾಗಿ ಪಿವಿಸಿ ಪೈಪ್, ಸಲ್ಫೇಟ್ ಬಳಸಿ ಶಬ್ಧ ಬರುವ ಸಾಧನಗಳ ಮೂಲಕ ಮಂಗಗಳ ಹಾವಳಿಯನ್ನು ನಿಯಂತ್ರಿಸುತ್ತಿದ್ದಾರೆ. ಉಳಿದಂತೆ ಸೈರನ್, ಬಂದೂಕುಗಳನ್ನೂ ಕೂಡ ಬಳಸುವ ಮೂಲಕ ಮಂಗಗಳ ಉಪಟಳವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ
ನಗರ ಪ್ರದೇಶದಿಂದ ಜಿಲ್ಲೆಗೆ ಮಂಗಗಳ ಸ್ಥಳಾಂತರ ಶಂಕೆ
ನಗರ ಪ್ರದೇಶಗಳಾದ ಮೈಸೂರು, ಬೆಂಗಳೂರು ವ್ಯಾಪ್ತಿಯಲ್ಲಿ ಜನರಿಗೆ ತಲೆನೋವಾಗಿ ಪರಿಣಮಿಸಿದ್ದ ಮಂಗಗಳನ್ನು ಕಂಟೈನರ್ಗಳ ಮೂಲಕ ತಂದು ಕೊಡಗು ಜಿಲ್ಲೆಯಲ್ಲಿ ಬಿಡಲಾಗುತ್ತಿದೆ ಎಂಬ ಆರೋಪ ಇಲ್ಲಿನ ಕೃಷಿಕರದ್ದಾಗಿದೆ. ದಿನದಿಂದ ದಿನಕ್ಕೆ ಮಂಗಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕೃಷಿಕರಲ್ಲಿ ಸಂಶಯಕ್ಕೆ ಎಡೆಮಾಡಿದೆ. ನಗರ ಪ್ರದೇಶಗಳಲ್ಲಿ ಉಪಟಳ ನೀಡುತ್ತಾ, ಅಂಗಡಿಗಳ ಸಾಮಗ್ರಿಗಳನ್ನು ಹೊತ್ತೊಯ್ಯುವ ಮಂಗಗಳೇ ಇದೀಗ ಕೊಡಗು ಜಿಲ್ಲೆಯ ಮನೆಗಳಿಗೆ ನುಗ್ಗುತ್ತಿವೆ ಎಂದು ಆರೋಪಿಸಿದ್ದಾರೆ.