ಚೆಯ್ಯಂಡಾಣೆ, ಸೆ. ೨೮: ಚೆಯ್ಯಂಡಾಣೆ ಸಮೀಪದ ಕೊಕೇರಿ ಗ್ರಾಮದ ಕಾವೇರಿ ಮಹಿಳಾ ಮಂಡಲದ ಕಟ್ಟಡದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಸ್ವಾಗತಿಸಲಾಯಿತು.
ಗ್ರಾಮಸ್ಥ ಚೇನಂಡ ಜೆಪ್ಪು ದೇವಯ್ಯ ಮಾತನಾಡಿ, ನೂತನವಾಗಿ ಆಯ್ಕೆಯಾದ ಶಾಸಕರು ಗ್ರಾಮದ ಮೇಲೆ ಅಭಿಮಾನವಿಟ್ಟು ನಮ್ಮ ಕೊಕೇರಿ ಗ್ರಾಮದ ಕೊಕೇರಿ-ಕೊಳಕೇರಿ ಮಾರ್ಗದ ೬ ಕಿ.ಮೀ. ರಸ್ತೆಯನ್ನು ಡಾಂಬರೀಕರಣ ಮಾಡಿಸಿಕೊಡಬೇಕು. ಅದರ ಜೊತೆ ನೀರಿನ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವಂತೆ ಹಾಗೂ ಇತರ ಬೇಡಿಕೆಗಳ ಬಗ್ಗೆ ಗಮನ ಸೆಳೆದರು.
ಗ್ರಾಮಸ್ಥರ ಪರವಾಗಿ ಬಿದ್ದಂಡ ರವಿ ಶಾಸಕರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ೬ ತಿಂಗಳೊಳಗೆ ಕಂದಾಯ ಇಲಾಖೆಯ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ನನ್ನ ಉದ್ದೇಶ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ಚೇನಂಡ ಸನ್ನಿ ಬೋಪಯ್ಯ ವಹಿಸಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೌಶಿ ಕಾವೇರಮ್ಮ, ಉಪಾಧ್ಯಕ್ಷ ವಿನೋದ್ ನಾಣಯ್ಯ, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.