ವೀರಾಜಪೇಟೆ, ಸೆ. ೨೯: ಉತ್ತಮವಾದ ನೂತನ ಕಾಂಕ್ರೀಟ್ ರಸ್ತೆ ಇಲ್ಲಿನ ಸದಸ್ಯರ ಪ್ರಯತ್ನದಿಂದ ನೆಹರು ನಗರದ ನಿವಾಸಿಗಳಿಗೆ ಲಭ್ಯವಾಗಿದೆ. ಇಲ್ಲಿನ ನಿವಾಸಿಗಳು ಇದನ್ನು ಬಳಸಿಕೊಳ್ಳುವಂತಾಗಬೇಕು ಎಂದು ರಾಜ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ವೀರಾಜಪೇಟೆ ಪಟ್ಟಣದ ನೆಹರು ನಗರದ ೭ ಮತ್ತು ೮ನೇ ವಾರ್ಡ್ನಲ್ಲಿ ನಗರೋತ್ಥಾನ ೪ನೇ ಹಂತ ಯೋಜನೆಯ ಅನುದಾನ ರೂ. ೧೮ ಲಕ್ಷ, ಹಾಗೂ ರೂ. ೭ ಲಕ್ಷ ಒಟ್ಟು ರೂ. ೨೫ ಲಕ್ಷ ವೆಚ್ಚದಲ್ಲಿ ಎರಡು ಕಡೆ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ವೀರಾಜಪೇಟೆಯೊಂದೇ ನಗರ ಪ್ರದೇಶ ಇರುವುದು.
ಈ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ವಿಶೇಷವಾಗಿ ನೆಹರು ನಗರ ವಾರ್ಡ್ನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಹೆಚ್ಚು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಬೇಕು ಎನ್ನುವ ಚಿಂತನೆ ಇದೆ. ಈ ಬಾರಿ ಮಳೆಯ ಕೊರತೆ ಎಲ್ಲೆಡೆ ಕಾಣಿಸಿಕೊಂಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ಪುರಸಭೆ ಅಧಿಕಾರಿಗಳು ನೀರಿನ ಸಮಸ್ಯೆ ನೀಗಿಸುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಹಾಗೆಯೇ ಘನತ್ಯಾಜ್ಯ ನಿರ್ವಹಣೆಯ ದೊಡ್ಡ ಸಮಸ್ಯೆ ಮಾರಕವಾಗಿ ಪರಿಣಮಿಸಿದೆ. ಅದರ ನಿರ್ವಹಣೆ ಸೂಕ್ತ ರೀತಿಯಲ್ಲಿ ಆಗಬೇಕು ಎಂದರು.
ಪುರಸಭೆ ಸದಸ್ಯೆ ದೇಚಮ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಪುರಸಭೆಯ ಇತರ ವಾರ್ಡ್ಗಳಿಗಿಂತ ನೆಹರು ನಗರ ವಾರ್ಡ್ನಲ್ಲಿ ಸಮಸ್ಯೆ ಹೆಚ್ಚಿದೆ. ಈ ವಾರ್ಡ್ಗೆ ೫ ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತದೆ. ಈ ಹಿಂದೆ ಇಲ್ಲಿನ ನಿವಾಸಿಗಳಿಗೆ ಸಾಕಷ್ಟು ಸಮಸ್ಯೆಗಳು ಇದ್ದವು. ಇದೀಗ ಹಲವು ಸಮಸ್ಯೆಗಳು ಬಗೆಹರಿದು ಅಭಿವೃದ್ಧಿ ಕಂಡಿದೆ. ನೆಹರು ನಗರವನ್ನು ಸ್ಲಂ ಏರಿಯಾ ಅಂತ ಗುರುತಿಸಲಾಗಿದ್ದು ಕೊಳಚೆ ನಿರ್ಮೂಲನೆ ಮಂಡಳಿ ಯಿಂದ ಬರುವಂತಹ ಎಲ್ಲಾ ಅನು ದಾನಗಳನ್ನು ಬಿಡುಗಡೆ ಮಾಡಿಸಿ ಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು. ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಸ್ಥಳೀಯ ವಾರ್ಡ್ ಸದಸ್ಯರಾದ ಅಗಸ್ಟಿನ್ ಬೆನ್ನಿ, ಪುರಸಭೆ ಸದಸ್ಯರಾದ ಮಹ್ಮದ್ ರಾಫಿ, ಎಸ್.ಹೆಚ್. ಮತೀನ್, ಸುನಿತಾ, ರಜನಿಕಾಂತ್, ರಾಜೇಶ್, ಕಾಂಗ್ರೆಸ್ ನಗರಾಧ್ಯಕ್ಷ ಮಾದಂಡ ತಿಮ್ಮಯ್ಯ ಹಾಗೂ ಪುರಸಭೆ ಸದಸ್ಯರುಗಳು ಹಾಗೂ ಗುತ್ತಿಗೆದಾರ ನವೀನ್ ಸೇರಿದಂತೆ ನೆಹರು ನಗರದ ನಿವಾಸಿಗಳು ಭಾಗವಹಿಸಿದ್ದರು.