ಕುಶಾಲನಗರ, ಸೆ. ೨೯: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್ ಭವ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ನಡೆದ ಪ್ರಾಥಮಿಕ ಆರೋಗ್ಯ ಮೇಳವನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಚಂದ್ರಕಲಾ, ಸರ್ಕಾರದ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವಲ್ಲಿ ಪ್ರತಿಯೊಬ್ಬರು ಕಾಳಜಿ ವಹಿಸಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್, ಜನಸಾಮಾನ್ಯರಿಗೆ ಆರೋಗ್ಯ ಶಿಕ್ಷಣ ಹೊರೆಯಾಗಿ ಪರಿಣಮಿಸಬಾರದು. ಈ ಸಂಬAಧ ಸರಕಾರ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡುತ್ತಿದೆ. ಇದರ ಪ್ರಯೋಜನವನ್ನು ಜನರಿಗೆ ಸದ್ಬಳಕೆ ಮಾಡುವಂತೆ ಇಲಾಖೆ ಕಾರ್ಯತತ್ಪರರಾಗಬೇಕು.

ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಮಾತನಾಡಿ, ಆಸ್ಪತ್ರೆಗಳಲ್ಲಿ ತುರ್ತು ಘಟಕಗಳು ದಿನದ ೨೪ ಗಂಟೆಗಳ ಕಾಲ ಕಾರ್ಯ ನಿರ್ವಹಿಸಬೇಕು ಎಂದರಲ್ಲದೆ ನೇತ್ರದಾನ, ರಕ್ತದಾನ, ಅಂಗಾAಗ ದಾನಗಳ ಬಗ್ಗೆ ಜನರಿಗೆ ಮಾಹಿತಿ ಒದಗಿಸಬೇಕು ಎಂದು ಹೇಳಿದರು.

ತಮ್ಮ ಕಣ್ಣು ದಾನ ಮಾಡುವುದಾಗಿ ಘೋಷಣೆ ಮಾಡಿದ ಮಂಜುನಾಥ್ ಗುಂಡೂರಾವ್, ಈ ಮೂಲಕ ಅಂಗಾAಗ ದಾನಿಗಳಿಗೆ ಪ್ರೇರಣೆಯಾದರು. ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸತೀಶ್, ಪ್ರಾಥಮಿಕ ಆರೋಗ್ಯ ಮೇಳದಲ್ಲಿ ಹೊರ ರೋಗಿಗಳಿಗೆ ಉಚಿತ ಔಷಧಿ, ನಿರ್ಣಾಯಕ ಸೇವೆ, ಆಯುಷ್ಮಾನ್ ಐಡಿ ಕಾರ್ಡ್ ವಿತರಣೆ ಮತ್ತಿತರ ಇಲಾಖೆ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸ ನಡೆಯಲಿದೆ ಎಂದು ಮಾಹಿತಿ ಒದಗಿಸಿದರು.

ಈ ಸಂದರ್ಭ ಪ್ರಮುಖರಾದ ಜೋಸೆಫ್ ವಿಕ್ಟರ್ ಸೋನ್ಸ್, ನಟೇಶ್ ಗೌಡ, ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಅಧಿಕಾರಿ ಡಾ. ಮಧುಸೂದನ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ ಮತ್ತು ವೈದ್ಯರು ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಇದ್ದರು.