ವೀರಾಜಪೇಟೆ, ಸೆ. ೨೯: ಸ್ವ-ಉದ್ಯೋಗ ತರಬೇತಿಗಳನ್ನು ನಿರಂತರವಾಗಿ ಹಮ್ಮಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಗ್ರಾಮೀಣ ಮಹಿಳೆಯರ ಪಾಲಿನ ಆಶಾಕಿರಣವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ವೀರಾಜಪೇಟೆ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ವಾಟೆಕಾಡು ಕಣ್ವ ಮುನೀಶ್ವರ ದೇವಸ್ಥಾನದ ಸಭಾಂಗಣದಲ್ಲಿ ಯೋಜನೆಯ ಸದಸ್ಯರುಗಳಿಗೆ ಸ್ವ-ಉದ್ಯೋಗದೊಂದಿಗೆ ಸ್ವಾವಲಂಬನೆಯ ಮೂಲಕ ಮಹಿಳೆಯರ ಬದುಕು ಹಸನಾಗಿಸಲು ಅಣಬೆ ಬೇಸಾಯ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಲೀಲಾವತಿ ಅವರು, ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.
ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪಲುವಿನ ವಿಷಯ ತಜ್ಞ ಡಾ. ಪ್ರಭಾಕರ್ ಮಾತನಾಡಿ, ಅಣಬೆ ಬೇಸಾಯ ಕ್ರಮಗಳು, ಬೆಳೆಯುವ ವಿಧಾನಗಳು, ಆಹಾರ ಪದ್ಧತಿಗೆ ಸಹಕಾರಿ, ಮಾರುಕಟ್ಟೆ ವ್ಯವಸ್ಥೆ ಎಂಬೆಲ್ಲ ವಿಚಾರದ ಬಗ್ಗೆ ಸವಿಸ್ತಾರವಾದ ಮಾಹಿತಿಗಳನ್ನು ಪ್ರಾತ್ಯಕ್ಷಿಕೆ ಮುಖೇನವಾಗಿ ನೀಡಿದರು.
ಈ ಸಂದರ್ಭ ಉಚಿತವಾಗಿ ಅಣಬೆ ಬೀಜಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ತಾಲೂಕು ಯೋಜನಾಧಿಕಾರಿ ದಿನೇಶ್ ಬಿ. ವೀಣಾ, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೇಯಾ, ಸೇವಾಪ್ರತಿನಿಧಿ ಕಾವೇರಿ ಪಾಲ್ಗೊಂಡಿದ್ದರು.
ಈ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಾಟೆಕಾಡು ಒಕ್ಕೂಟದ ವತಿಯಿಂದ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಯೋಜನೆಯ ಕಾರ್ಯಕರ್ತರು, ಸೇವಾಪ್ರತಿನಿಧಿಗಳು, ಸದಸ್ಯರುಗಳು ಭಾಗವಹಿಸಿದ್ದರು.