ಅನಿಲ್ ಎಚ್.ಟಿ.
ಬೆಂಗಳೂರು, ಸೆ. ೨೭: ಈ ಅಂಗಡಿಗೆ ತೆರಳಿ ಕಾಫಿ ಕೊಡಿ ಎಂದರೆ ಇಲ್ಲಿನ ಸಿಬ್ಬಂದಿ ಮೌನವಾಗಿಯೇ ಪ್ರತಿಕ್ರಿಯಿಸಿದರು. ಮತ್ತೆ... ಕಾಫಿ ಕೊಡಿ ಎಂದಾಗಲೂ ಕಣ್ಣಿನಲ್ಲಿಯೇ ಸನ್ನೆ ಮಾಡುವ ಮೂಲಕ ಉತ್ತರಿಸಿದರು. ಜೋರಾಗಿ ಹೇಳಿದರೂ ಕೆಲವರು ಕೇಳದವರಂತೆ ಮಾತಿನಲ್ಲಿ ಉತ್ತರಿಸದೇ ಮುಖಭಾವದಲ್ಲಿಯೇ ಪ್ರತಿಕ್ರಿಯಿಸಿದರು. ಯಾಕೆ ಇವರು ಹೀಗೆ ಎಂದು ಯೋಚಿಸುತ್ತಲೇ ಅಲ್ಲಿದ್ದ ಮಾಹಿತಿ ಫಲಕ ಓದಿದಾಗ ತಿಳಿದದ್ದು, ಈ ಕಾಫಿ ಮಳಿಗೆಯಲ್ಲಿನ ಸಿಬ್ಬಂದಿಗಳಿಗೆ ಮಾತನಾಡಲು ಬರುವುದಿಲ್ಲ.. ಕೆಲವರಿಗೆ ಕಿವಿ ಕೇಳುವುದಿಲ್ಲ.. ಇಷ್ಟು ಮಾತ್ರವಲ್ಲ.. ಒಂದಿಬ್ಬರಿಗೆ ಕಾಲು ಕೂಡ ಇಲ್ಲ. ಹೀಗಿದ್ದರೂ ಕಾಫಿ ಕೆಫೆ ನಡೆಸುವ ಉತ್ಸಾಹಕ್ಕೆ ಮಾತ್ರ ಕೊರತೆ ಆಗಲೇ ಇಲ್ಲ.
ವಿಶ್ವ ಕಾಫಿ ಸಮ್ಮೇಳನದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಮಿಟ್ಟಿ ಕಾಫಿ ಕೆಫೆ ವಿಶಿಷ್ಟ ಕಾರಣಕ್ಕಾಗಿ ಕಣ್ಮನ ಸೆಳೆಯುತ್ತಿದೆ. ನಾವು ವಿಶೇಷಚೇತನರು. ನಮ್ಮಲ್ಲಿ ಕೊರತೆಯಿರಬಹುದು. ಆದರೆ, ನಾವು ನೀಡುವ ಕಾಫಿಯ ಸ್ವಾದದಲ್ಲಿ ಈ ಕೊರತೆ ಕಾಡದು ಎಂಬ ಫಲಕದೊಂದಿಗೆ ಕಾಫಿ ಮಾರಾಟಕ್ಕೆ ಮುಂದಾಗಿರುವ ಮಿಟ್ಟಿ ಕಾಫಿ ಕೆಫೆಗೆ ತೆರಳಿ ಅಲ್ಲಿನ ವಿಶೇಷಚೇತನ ಸಿಬ್ಬಂದಿಗಳನ್ನು ನೋಡಿದರೆ ಎಂತಹ ಕಲ್ಲು ಮನಸ್ಸುಗಳು ಕೂಡ ಭಾವುಕವಾಗುತ್ತವೆ. ಕಹಿ ಕಾಫಿಯೂ ಇವರ ಸೇವೆಗೆ ಮೆಚ್ಚಿ ಸಿಹಿಯಾದಂತೆ ಭಾಸವಾಗುತ್ತದೆ.
ಮಿಟ್ಟಿ ಕೆಫೆೆ ಎಂಬುದು ಲಾಭರಹಿತ ಸಂಸ್ಥೆಯಾಗಿ ಬೆಳೆದು ಬಂದಿದೆ. ಬಾಲ್ಯದಲ್ಲಿಯೇ ಮಾತು ಕಳೆದುಕೊಂಡ, ಕಿವಿಕೇಳದವರ, ವಿಶೇಷಚೇತನರಾದ ವ್ಯಕ್ತಿಗಳಿಗೆ ಕೆಲಸ ನೀಡುವ ಮಾನವೀಯ ಗುಣಗಳನ್ನು ಕಾಪಾಡಿಕೊಂಡಿರುವ ಮಿಟ್ಟಿ ಕೆಫೆಯು ಭಾರತದಾದ್ಯಂತ ತನ್ನ ಕಾಫಿ ಅಂಗಡಿಗಳನ್ನು ಹೊಂದಿದೆ. ನೂರಾರು ವಿಶೇಷಚೇತನರಿಗೆ ಉದ್ಯೋಗ ಭಾಗ್ಯ ಕಲ್ಪಿಸಿದೆ. ಇವರ ಕಾಯಕಕ್ಕೆ ದೇಶೀಯ ಮತ್ತು ಅಂರ್ರಾಷ್ಟಿçÃಯ ಪ್ರಶಸ್ತಿಗಳೂ ಲಭಿಸಿವೆ.
ವಿಶೇಷಚೇತನರ ಮೂಲಕ ಸಾಧನೆಯ ಮತ್ತೊಂದು ಮಜಲಿನ ಸಂದೇಶವನ್ನು ಮಿಟ್ಟಿ ಸಂಸ್ಥೆ ಸಾರುತ್ತಿದೆ. ಮಾನಸಿಕವಾಗಿ ಹಿಂದುಳಿದವರಿಗೂ ಮಿಟ್ಟಿಯಲ್ಲಿ ಕೆಲಸ ದೊರಕಿದೆ. ಹಾಗೆಂದು ಇಲ್ಲಿನ ಸಿಬ್ಬಂದಿ ಕೆಲಸಕ್ಕೆ ಮುಂದಾದರೆ ಯಾವುದೇ ಹಿಂಜರಿಕೆ ಇಲ್ಲದೇ ಇತರರಂತೆಯೇ ಸಕ್ರಿಯರಾಗಿ ತಮ್ಮ ಕೆಲಸದಲ್ಲಿ ಮಗ್ನರಾಗುತ್ತಿದ್ದಾರೆ.
ಜಾಗತೀಕರಣದ ದಿನದಲ್ಲಿಯೂ ಗಮನಸೆಳೆದ ಪರಂಪರಾಗತ ಪದ್ಧತಿ..
ಕಾಫಿ ಸಮ್ಮೇಳನದಲ್ಲಿ ಕೇರಳದ ಇಡುಕ್ಕಿಯ ಆದಿವಾಸಿಗಳ ಮಳಿಗೆಯೊಂದು ಗಮನ ಸೆಳೆಯಿತು. ಕಾಫಿ ಬೀಜವನ್ನು ಬೀಸುವ ಕಲ್ಲಿನಲ್ಲಿ ರುಬ್ಬುತ್ತಾ ಬಿಸಿಬಿಸಿ ಬೇಳೆ ತಯಾರಿಸುತ್ತಿದ್ದ ಆದಿವಾಸಿ ಮಹಿಳೆಯರು ಹಳೇ ಕಾಲದ ಸಾಂಪ್ರದಾಯಿಕ ಪದ್ಧತಿಯಂತೆ ಕಾಫಿ ಪುಡಿ ತಯಾರಿಕೆಯಲ್ಲಿ ಸಕ್ರಿಯರಾಗಿದ್ದಾರೆ. ಮುನ್ನಾರ್ ಜಿಲ್ಲೆಯ ಹಿಂದುಳಿದ ಗ್ರಾಮವಾದ ಕಿಜತ್ತೂರಿಗೆ ಸೇರಿರುವ ಆದಿವಾಸಿ ಮಹಿಳೆಯರು ಇಂದಿನ ಆಧುನಿಕ ಯಂತ್ರೋಪಕರಣಗಳ ನೆರವಿಲ್ಲದೇ ಹಳೇ ಪದ್ಧತಿಯಂತೆ ಕಲ್ಲಿನಲ್ಲಿ ಕಾಫಿ ಬೀಜ ರುಬ್ಬುತ್ತಾ ಅದನ್ನು ಬಾಣಲೆಯಲ್ಲಿ ಹದವಾಗಿ ಬಿಸಿ ಮಾಡುತ್ತಾ ತಮ್ಮ ಸಂಪ್ರದಾಯ ಕಾಯ್ದುಕೊಂಡಿದ್ದಾರೆ.
ಗAಟೆಗೆ ೪ ಕಿ.ಮೀ. ಸಾಗುತ್ತಿದ್ದ ಜೀಪು..
ವಿಶ್ವ ಕಾಫಿ ಸಮ್ಮೇಳನದಲ್ಲಿ ೭೮ ವರ್ಷಗಳಷ್ಟು ಹಳೇಯದ್ದಾದ ವಿಲ್ಲೀಸ್ ಜೀಪ್ ಕೂಡ ಜನಮನ ಸೆಳೆದಿದೆ. ಎರಡನೇ ವಿಶ್ವಯುದ್ಧ ಸಂದರ್ಭದಲ್ಲಿ ಶಾಂತಿ ಸಂದೇಶ ಸಾರಲು ಬಳಕೆಯಾಗಿದ್ದ ೧೯೪೫ನೇ ವರ್ಷದ ವಿಲ್ಲೀಸ್ ಜೀಪು, ಅಂದಿನ ಕಾಲದಲ್ಲಿ ಅಮೇರಿಕಾದ ಜನತೆಯ ಬಹುಬೇಡಿಕೆಯ ವಾಹನವಾಗಿತ್ತಂತೆ. ಪ್ರತಿ ಗಂಟೆಗೆ ಬರೋಬ್ಬರಿ ನಾಲ್ಕು ಕಿ.ಮೀ. ಸಂಚರಿಸುವ ಸಾಮರ್ಥ್ಯವಿದ್ದ ವಿಲ್ಲೀಸ್ ಜೀಪು, ದಿನಕ್ಕೆ ೧೦ ಗಂಟೆ ಸಂಚಾರ ಮಾಡುವ ಸಾಮರ್ಥ್ಯ ಹೊಂದಿತ್ತು. ಯುದ್ಧ ಕಾಲದಲ್ಲಿ ಶಾಂತಿಯ ಸಂದೇಶ ವಾಹಕನಂತೆ ಈ ಜೀಪನ್ನು ಬಳಸುತ್ತಿ ದ್ದರಂತೆ. ಈ ಹಳೇ ಜೀಪನ್ನು ಸಕಲೇಶಪುರದ ಹಾರ್ಲೇ ಎಸ್ಟೇಟ್ನ ಪೂರ್ಣೇಶ್ ಎಂಬ ವವರು ಖರೀದಿಸಿದ್ದು ಸಮ್ಮೇಳನದಲ್ಲಿ ಪ್ರದರ್ಶನಕ್ಕಿರಿಸಿದ್ದರು.
ಜಾನಪದ ಕಾಫಿ
ನಮ್ಮ ನಾಡಿನ ಜಾನಪದವೇ ಎಲ್ಲದಕ್ಕೂ ಮೂಲಾಧಾರ ಎನ್ನುವುದಾದಲ್ಲಿ ವಿಶ್ವ ಕಾಫಿ ಸಮ್ಮೇಳನ ಇಂತಹ ಜಾನಪದಕ್ಕೂ ಮಹತ್ವ ನೀಡಿದೆ. ಸಮ್ಮೇಳನದ ಅಲ್ಲಲ್ಲಿ ಜಾನಪದ ಕಲಾಕೃತಿಗಳು ಮನ ಸೆಳೆಯುತ್ತಿವೆ. ಕೇರಳದ ಯಕ್ಷ ಕಲೆಯನ್ನು ಬಿಂಬಿಸುವ ಕಲಾಕೃತಿ, ಕನ್ನಡನಾಡಿನ ಜಾನಪದ ರಂಗನ್ನು ಬಿಂಬಿಸುವ ಕಲಾಕೃತಿಗಳನ್ನು ಸಮ್ಮೇಳನದ ಅಲ್ಲಲ್ಲಿ ಇರಿಸಲಾಗಿದ್ದು ವಿಶಿಷ್ಟತೆಯಿಂದಾಗಿ ಪ್ರತಿನಿಧಿಗಳ ಗಮನವನ್ನು ಸೆಳೆಯುತ್ತಿವೆ.
ಕಾಫಿ ಕಲಾಕೃತಿ
ಕಾಫಿಯಲ್ಲಿಯೇ ಚಿತ್ರ ಚಿತ್ತಾರ ಗಳನ್ನು ಬಿಡಿಸಿದ ಹೊಸೂರು ಮೂಲದ ಹಿಮಬಿಂದು ಎಂಬ ಮಹಿಳೆಯ ನೂರಾರು ಕಲಾಕೃತಿಗಳೂ ಸಮ್ಮೇಳನದಲ್ಲಿ ಗಮನ ಸೆಳೆದವು. ಕಾಫಿ ಪಲ್ಪ್, ಫಿಲ್ಟರ್ ಕಾಫಿಯ ತ್ಯಾಜ್ಯವನ್ನೆಲ್ಲಾ ಬಳಸಿ ರಂಗುರAಗಿನ ಚಿತ್ತಾರಗಳ ಕಲಾಕೃತಿಗಳನ್ನು ಹಿಮಬಿಂದು ರಚಿಸಿದ್ದಾರೆ. ಪ್ರಿಡ್ಜ್ ಮ್ಯಾಗ್ನೇಟ್, ಅಲಂಕಾರಿಕ ಕಲಾಕೃತಿಗಳೂ ಕಾಫಿ ತ್ಯಾಜ್ಯ ಮತ್ತು ಕಾಫಿ ಪುಡಿಯಲ್ಲಿ ಸುಂದರವಾಗಿ ಮೂಡಿಬಂದಿದೆ.
ವಿಶ್ವ ಕಾಫಿ ಸಂಗಮ
ಬೆAಗಳೂರಿನಲ್ಲಿ ನಡೆಯುತ್ತಿರುವ ೫ನೇ ವಿಶ್ವ ಕಾಫಿ ಸಮ್ಮೇಳನ ಹೊಸದ್ದೊಂದು ದಾಖಲೆ ನಿರ್ಮಿಸಿದೆ. ವಿಶ್ವದ ಉದ್ದಗಲಕ್ಕೆ ಸೇರಿದ ವಿವಿಧ ಕಾಫಿ ಉದ್ಯಮಿಗಳು ಇಲ್ಲಿನ ಕಾಫಿ ಕೆಫೆ ಮಳಿಗೆಯಲ್ಲಿ ತಮ್ಮ ಕಾಫಿ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದಾರೆ. ಕಹಿ ಕಾಫಿ, ಪುನಗಿನ ಬೆಕ್ಕಿನ ತ್ಯಾಜ್ಯದ ಕಾಫಿ, ವಿವಿಧ ದೇಶಗಳ ವೈವಿಧ್ಯಮಯ ಕಾಫಿಗೂ ಭಾರತೀಯ ಕೆಫೆ ಹೆಸರಿನ ಮಳಿಗೆ ಹೆಸರಾಯಿತು. ಉಗಾಂಡಾ, ಗ್ಯಾಟೆಮಾಲ, ಬ್ರೆಜಿಲ್, ಕೊಲಂಬಿಯಾ, ಇಥಿಯೋಪಿಯಾ, ಪಪುಆ ನ್ಯೂ ಗಿನಿಯಾ, ವಿಯೆಟ್ನಾಂ, ಕೀನ್ಯಾ, ಬೊರಾಂಡಿ, ತಾಂಜೆನಿಯಾ ಮತ್ತಿತರ ಕಾಫಿ ಬೆಳೆಗಾರ ಪ್ರಾಂತ್ಯಗಳ ಕಾಫಿಯನ್ನು ಪ್ರದರ್ಶಿಸಲಾಗಿದೆ. ಈ ಕಾಫಿಯನ್ನು ಸಂದರ್ಶಕರಿಗೆ ಸೇವಿಸಲು ನೀಡುತ್ತಿದ್ದಾರೆ. ಹಾಲು ಮತ್ತು ಸಕ್ಕರೆ ರಹಿತವಾದ ಇಂತಹ ಕಾಫಿಯು ಭಾರತದ ಸ್ವಾದಿಷ್ಟ ಕಾಫಿ ಸವಿದವರಿಗೆ ಸೇವಿಸಲು ತುಸು ಕಷ್ಟವಾಗುತ್ತದೆ. ಹೀಗಿದ್ದರೂ ವಿಶ್ವದಗಲ ವಿಸ್ತರಿಸಿರುವ ಕಾಫಿಯ ಸವಿಯನ್ನು ಸೇವಿಸಲು ವಿಶ್ವ ಕಾಫಿ ಸಮ್ಮೇಳನ ಅವಕಾಶ ಕಲ್ಪಿಸಿದೆ. ವೈವಿಧ್ಯತೆಯ ಕಾಫಿ ಸಂಗಮಕ್ಕೆ ಸಮ್ಮೇಳನ ಕಾರಣವಾಗಿದೆ.