ಸೋಮವಾರಪೇಟೆ, ಸೆ, ೨೭: ಸಮೀಪದ ಮಾದಾಪುರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಬಿಜೆಪಿ ಸಹಕಾರ ಭಾರತಿ ಜಿಲ್ಲಾಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ ಅವರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಪವಿತ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮಾಜೀ ಅಧ್ಯಕ್ಷ ಮೊಣ್ಣಪ್ಪ ಸುಬ್ರಮಣಿ ಮತ್ತು ನಾಪಂಡ ಉಮೇಶ್ ಉತ್ತಪ್ಪ ಸ್ಪರ್ಧಿಸಿದ್ದರು. ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ನಾಪಂಡ ಉಮೇಶ್ ಉತ್ತಪ್ಪ ಅವರು ೮ ಮತಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಮೊಣ್ಣಪ್ಪ ಸುಬ್ರಮಣಿ ಅವರಿಗೆ ೪ ಮತಗಳು ಲಭಿಸಿದವು.

ಈ ಹಿಂದೆ ನಡೆದಿದ್ದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಒಟ್ಟು ೧೩ ಕ್ಷೇತ್ರಗಳ ಪೈಕಿ ಬಿಜೆಪಿ ಬೆಂಬಲಿತರು ೧೧ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ದೇಶಕರುಗಳಾದ ತಿಲಕ್‌ಕುಮಾರ್, ಕುಟ್ಟಂಡ ಕುಟ್ಟಪ್ಪ, ಮುಕ್ಕಾಟಿರ ತಿಮ್ಮಯ್ಯ, ದೇಚಮ್ಮ, ಎನ್.ಕೆ. ಭವಿನ, ಎಂ.ಆರ್. ಗಿರೀಶ್, ಹೆಚ್.ಈ. ಭೀಮಯ್ಯ, ಸಿ.ಎ. ತಮ್ಮಯ್ಯ, ಕೆ.ಎ. ಲತೀಫ್ ಅವರುಗಳು ಭಾಗವಹಿಸಿದ್ದರು.

ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಬಿ.ಜಿ. ಸಂದೀಪ್ ಕಾರ್ಯನಿರ್ವಹಿಸಿದರು. ಕಾರ್ಯನಿರ್ವಹಣಾಧಿಕಾರಿ ಕಾವೇರಪ್ಪ ಇದ್ದರು.