ಭಾಗಮಂಡಲ, ಸೆ. ೨೭: ಭಾಗಮಂಡಲ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷ ಕಾಳನ ರವಿ ಮಾತನಾಡಿ, ಗ್ರಾಮ ಪಂಚಾಯಿತಿ ವತಿಯಿಂದ ತುಲಾ ಸಂಕ್ರಮಣದ ಪ್ರಯುಕ್ತ ಪಟ್ಟಣದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ವಾರದೊಳಗೆ ಬೀದಿ ದೀಪ ಅಳವಡಿಸುವ ಕಾರ್ಯ ಮುಕ್ತಾಯಗೊಳ್ಳಲಿದೆ. ಅಗತ್ಯ ಇರುವಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ಶೌಚಾಲಯಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ ಎಂದರು.
ರಸ್ತೆಯ ಎರಡು ಬದಿಗಳ ಕಾಡು - ಗಿಡಗಂಟಿಗಳನ್ನು ಕಡಿದು ಸ್ವಚ್ಛತಾ ಕಾರ್ಯ ಕೈಗೊಳ್ಳಲು, ಲೋಕೋಪಯೋಗಿ ಇಲಾಖೆಗೆ ಪತ್ರವನ್ನು ಕಳಿಸಲಾಗಿದೆ ಎಂದರು.
ಭಾಗಮಂಡಲ-ತಲಕಾವೇರಿಯಲ್ಲಿ ವಾಹನದಟ್ಟಣೆ ತಪ್ಪಿಸುವ ಸಲುವಾಗಿ ಪಾದಚಾರಿಗಳು ನಡೆದುಕೊಂಡು ಹೋಗುವ ತಲಕಾವೇರಿ-ಪಾಂಡಿಮನೆ ಕೆಂಪು ರಾಶಿ ಮೊಟ್ಟೆ ಮಾರ್ಗವನ್ನು ದುರಸ್ತಿಗೊಳಿಸಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಪ್ರತಿದಿನ ಈ ರಸ್ತೆಯ ಬಳಕೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು. ಇದನ್ನು ಜಿಲ್ಲಾಡಳಿತಕ್ಕೆ ತಿಳಿಸುವಂತೆ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.
ತುಲಾ ಸಂಕ್ರಮಣಕ್ಕೆ ಸಂಬAಧಿಸಿದAತೆ ಮಡಿಕೇರಿಯಲ್ಲಿ ಅಧಿಕಾರಿಗಳ ಸಭೆಯನ್ನು ಕರೆದಿದ್ದು ಈ ಸಭೆಗೆ ಗ್ರಾಮ ಪಂಚಾಯಿತಿ ಅಧಕ್ಷರಿಗೆ ಆಹ್ವಾನ ನೀಡಲಾಗುತ್ತಿತ್ತು. ಆದರೆ ಈ ವರ್ಷ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಆಹ್ವಾನ ನೀಡದಿರುವ ಬಗ್ಗೆ ಜಿಲ್ಲಾಡಳಿತವನ್ನು ಪ್ರಶ್ನಿಸಬೇಕು ಎಂದು ಸದಸ್ಯರುಗಳು ಪಟ್ಟು ಹಿಡಿದರು. ಉಪಾಧ್ಯಕ್ಷೆ ಗಂಗಮ್ಮ, ಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.