ಮಡಿಕೇರಿ, ಸೆ. ೨೭: ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಶ್ರೀ ಕಾವೇರಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಕೊಡಗು ವಿಶ್ವವಿದ್ಯಾನಿಲಯದ ಉಪಕುಲಪತಿ ಸೀನಪ್ಪ ಉದ್ಘಾಟಿಸಿದರು.
ವಿದ್ಯಾರ್ಥಿ ದೆಸೆಯಲ್ಲಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಶಿಕ್ಷಣ ಕೇವಲ ಸರ್ಕಾರಿ ನೌಕರಿ ಪಡೆಯುವುದಷ್ಟೇ ಅಲ್ಲದೆ ವಿದ್ಯಾರ್ಥಿಗಳು ಉತ್ತಮ ಪ್ರಜೆಯಾಗಿ ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕುವುದಕ್ಕೆ ಶಿಕ್ಷಣ ಅತ್ಯಂತ ಅವಶ್ಯಕವಾಗಿದೆ. ೧೦ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯ ನಂತರ ವಿದ್ಯಾರ್ಥಿಗಳಿಗೆ ಹಲವು ವೃತ್ತಿಪರ ಶಿಕ್ಷಣ ತರಬೇತಿಗಳಿದ್ದು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು ಎಂದರು.
ಶ್ರೀ ಬನಶಂಕರಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಹಾಗೂ ಕುಶಾಲನಗರ ಪಾಲಿಟೆಕ್ನಿಕ್ ಕಾಲೇಜು ನಿವೃತ್ತ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ಅವರು ಮಾತನಾಡಿ, ಈ ಸಂಸ್ಥೆಯು ನಮಗೆ ಬದುಕು ಕಟ್ಟಿಕೊಳ್ಳಲು ಬುನಾದಿ ಹಾಕಿಕೊಟ್ಟಿದೆ. ಈ ಶಾಲೆಯಲ್ಲಿ ಓದಿದ ಹಲವಾರು ಹಿರಿಯ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಅಂತಹ ಮಹಾನ್ ವ್ಯಕ್ತಿಗಳ ಸಾಲಿಗೆ ಸೇರಬೇಕು. ಮುಂದಿನ ಭವಿಷ್ಯವನ್ನು ಭದ್ರವಾಗಿ ನಿರ್ಮಿಸಿಕೊಳ್ಳಬೇಕು ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿಗಳಾದ ಉಮೇಶ್ ಭಟ್ ಕೆ.ವಿ. ಅವರು, ಸಂಸ್ಥೆ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ನಾಗೇಂದ್ರ, ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಅರುಣ ಕುಮಾರಿ, ಗ್ರಾ.ಪಂ. ಸದಸ್ಯರಾದ ಚಂದ್ರಶೇಖರ್ ಜೋಗಿ ಅವರು ಮಾತನಾಡಿದರು.
ಕೊಡಗು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಗಗನ್, ಉಪನ್ಯಾಸಕರಾದ ಗೌತಮಿ ಮುಖ್ಯೋಪಾಧ್ಯಾಯರಾದ ಬಸವರಾಜಶೆಟ್ಟಿ, ಬೋಜೇಗೌಡ, ಅನಂತಕುಮಾರ್, ಮಂಜುನಾಥ್ ಉಪಸ್ಥಿತರಿದ್ದರು.
ಸಿ.ಡಿ. ಲೋಕೇಶ್ ಹಾಗೂ ಶ್ವೇತ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ. ವಿಜಯ್ಕುಮಾರ್ ಸ್ವಾಗತಿಸಿದರು. ಎನ್. ವೆಂಕಟ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ. ಕವಿತಾ ವಂದಿಸಿದರು.