ಸಿದ್ದಾಪುರ, ಸೆ. ೨೬: ನೆಲ್ಲಿಹುದಿಕೇರಿ ಗ್ರಾಮಸ್ಥರ ಮೌನ ಹಾಗೂ ದೌರ್ಬಲ್ಯವೇ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ, ಕಳಪೆ ಕಾಮಗಾರಿಗಳು ನಡೆಯಲು ಕಾರಣವಾಗಿದೆ ಎಂದು ಸಿಪಿಐಎಂ ಪಕ್ಷದ ಮುಖಂಡ ಪಿ.ಆರ್. ಭರತ್ ಅಭಿಪ್ರಾಯ ವ್ಯಕ್ತಪಡಿಸಿದರು. ನೆಲ್ಲಿಹುದಿಕೇರಿಯ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೆಲ್ಲಿಹುದಿಕೇರಿ ವ್ಯಾಪ್ತಿಯ ಬೆಟ್ಟದ ಕಾಡುವಿಗೆ ತೆರಳುವ ಕಾಂಕ್ರೀಟ್ ರಸ್ತೆಯ ಕಾಮಗಾರಿ ಕಳೆದ ಎರಡು ವರ್ಷಗಳ ಹಿಂದೆ ರೂ. ೬ ಲಕ್ಷ ವೆಚ್ಚದಲ್ಲಿ ನಡೆಸಲಾಗಿತ್ತು. ಇದೀಗ ಮತ್ತೊಮ್ಮೆ ಅದೇ ರಸ್ತೆಯನ್ನು ದುರಸ್ತಿ ನೆಪದಲ್ಲಿ ೬ ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸುತ್ತಿದ್ದು ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸುತ್ತಿದ್ದರೂ ಗ್ರಾ.ಪಂ ಮೌನ ವಹಿಸಿದೆ ಎಂದು ಆರೋಪಿಸಿದರು. ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ, ಕುಂಬಾರ ಗುಂಡಿಯಲ್ಲಿ ನಿರ್ಮಿಸಿದ್ದ ಕಿರು ಸೇತುವೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ಕ್ರಮ ಕೈಗೊಳ್ಳಬೇಕಾದ ಗ್ರಾಮ ಪಂಚಾಯಿತಿ ಭ್ರಷ್ಟಾಚಾರದಲ್ಲಿ ಕೈ ಜೋಡಿಸಿದೆ ಎಂದು ಭರತ್ ಆಕ್ರೋಶ ವ್ಯಕ್ತಪಡಿಸಿದರು. ರೂ. ಎರಡು ಕೋಟಿ ವೆಚ್ಚದಲ್ಲಿ ನೆಲ್ಲಿಹುದಿಕೇರಿ ಮುಖ್ಯ ರಸ್ತೆಯ ಅಗಲೀಕರಣ ಕಾಮಗಾರಿಯು ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿದರು. ನೆಲ್ಲಿಹುದಿಕೇರಿ ಗ್ರಾ.ಪಂ ಆಡಳಿತ ಮಂಡಳಿಯಲ್ಲಿ ಹೊಂದಾಣಿಕೆಯ ಕೊರತೆ ಇರುವ ಹಿನ್ನೆಲೆಯಲ್ಲಿ ಕೇವಲ ಒಬ್ಬ ಪಿಡಿಓ ವರ್ಗಾವಣೆಗೆ ಸದಸ್ಯರ ನಡುವೆ ಪರಸ್ಪರ ಗೊಂದಲ ಏರ್ಪಟ್ಟಿದೆ. ಈ ಪರಿಣಾಮ ಕಳೆದ ಎರಡು ತಿಂಗಳಿನಿAದ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಯಲ್ಲಿ ಪಿಡಿಓ ಸಾರ್ವಜನಿಕರ ಸೇವೆಗೆ ಲಭ್ಯವಿಲ್ಲ, ಕೂಡಲೇ ಖಾಯಂ ಪಿಡಿಓ ಹಾಗೂ ಕಾರ್ಯದರ್ಶಿಗಳ ನೇಮಕವಾಗಬೇಕೆಂದು ಒತ್ತಾಯಿಸಿದರು. ಸಮಸ್ಯೆ ಬಗೆಹರಿಯದಿದ್ದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಪಕ್ಷದ ಶಿವರಾಮನ್, ಚಂದ್ರನ್, ಅಬೀಬ್, ಜೋಸ್, ಶಿವಪ್ಪ ನಾಯಕ್, ಮುಸ್ತಫಾ ಹಾಗೂ ಇನ್ನಿತರರು ಹಾಜರಿದ್ದರು.