ಕೂಡಿಗೆ, ಸೆ. ೨೫: ಜೇನು ಕುರುಬ ಸಮುದಾಯವನ್ನು ಸದೃಢವಾಗಿ ಸಂಘಟಿಸಿ ಆ ಮೂಲಕ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬೆಳೆಸಿ, ದೊರೆಯಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಧ್ವನಿ ಎತ್ತಬೇಕಿದೆ ಎಂದು ಜೇನು ಕುರುಬರ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಜೆ.ಟಿ.ರಾಜಪ್ಪ ಸಲಹೆ ನೀಡಿದರು.

ಇಲ್ಲಿಗೆ ಸಮೀಪದ ಯಡವ ನಾಡು ಸಮುದಾಯ ಭವನದಲ್ಲಿ ನಡೆದ ಜೇನುಕುರುಬ ಸಮುದಾಯದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಜೇನು ಕುರುಬ ಜನಾಂಗದ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಯೋಜನೆಗಳನ್ನು ಕೆಲವರು ಪಡೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ನಾವು ಎಚ್ಚರ ವಹಿಸಬೇಕಿದೆ. ಆಮಿಷಗಳಿಗೆ ಬಲಿಯಾಗಿ ಜನಾಂಗದವರು ಮತಾಂತರ ಗೊಳ್ಳುವುದು ನಿಲ್ಲಬೇಕಿದೆ. ಇದಕ್ಕಾಗಿ ಎಲ್ಲರೂ ಸಂಘಟಿತರಾಗಿ ನಮ್ಮ ಸಂಸ್ಕೃತಿ ಉಳಿಸುವ ಕೆಲಸಕ್ಕೆ ಮುಂದಾಗಬೇಕಿದೆ ಎಂದರು.

ಸAಘದ ಮೈಸೂರು ಜಿಲ್ಲಾ ಉಪಾಧ್ಯಕ್ಷ ಬಸವಣ್ಣ ಮಾತನಾಡಿ, ಜನಾಂಗದವರು ಶಿಕ್ಷಣಕ್ಕೆ ಒತ್ತು ನೀಡುವಂತಾಗಬೇಕಿದೆ. ವಿದ್ಯಾಭ್ಯಾಸ ಪಡೆದುಕೊಳ್ಳಲು ಮುಂದಾಗಬೇಕಿದೆ. ಎಲ್ಲರೂ ಒಗ್ಗೂಡಿ ಶ್ರಮಿಸಿದಾಗ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದರು.

ಜೇನು ಕುರುಬ ಸಮದಾಯದ ಮುಖಂಡ, ಬಸವನಹಳ್ಳಿ ಲ್ಯಾಂಪ್ಸ್ ಸೊಸೈಟಿ ಮಾಜಿ ನಿರ್ದೇಶಕ ಜೆ.ಟಿ.ಕಾಳಿಂಗ ಮಾತನಾಡಿ, ಸಮು ದಾಯದವರನ್ನು ಎಚ್ಚರಿಸಿ ಸಂಘಟಿತರನ್ನಾಗಿಸಲು ಅವರಲ್ಲಿ ಅಗತ್ಯ ಅರಿವು, ಜಾಗೃತಿ ಮೂಡಿಸಲು ಈ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮತ್ತೋರ್ವ ಮುಖಂಡ ಜೆ.ಕೆ.ತಿಮ್ಮ ಅವರು ಅರಣ್ಯ ಹಕ್ಕು ಕಾಯ್ದೆ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಯಡವನಾಡು ಹಾಡಿಯ ನಂಜಣ್ಣ ಮಾತನಾಡಿ, ಸರಕಾರ ಸೌಲಭ್ಯ ಕೊಟ್ಟರೂ ಕೂಡ ಅರಣ್ಯ ಇಲಾಖೆ ನಮಗೆ ನಿರಂತರವಾಗಿ ಅಡ್ಡಿ ಉಂಟುಮಾಡುತ್ತಿದೆ. ಸೂರು, ನೀರಿಲ್ಲದ ಪರಿಸ್ಥಿತಿಯಲ್ಲಿ ಜೇನು ಕುರುಬ ಜನಾಂಗ ಇಂದಿಗೂ ಜೀವನ ಸಾಗಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇದೇ ಸಂದರ್ಭ ತಾಲೂಕು, ಜಿಲ್ಲಾಮಟ್ಟದ ಸಮಾವೇಶ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಜೇನು ಕುರುಬರ ಸಂಘದ ಮೈಸೂರು ಜಿಲ್ಲಾ ಕಾರ್ಯದರ್ಶಿ ಚಂದ್ರು, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಸಿದ್ದು, ಗಿರಿಜನ ಸಮಗ್ರ ಅಭಿವೃದ್ಧಿ ಕಲಾಸಂಸ್ಥೆ ಸಂಸ್ಥಾಪಕ ರಮೇಶ್ ಸೇರಿದಂತೆ ಯಡವನಾಡಿನ ರವಿ, ಮಾಲಂಬಿ ರಮೇಶ್, ಸಜ್ಜಳ್ಳಿ ವಿಶ್ವ, ಚಂದ್ರು, ಸೂಳೆಬಾವಿ ಹರೀಶ್, ಕೆ.ಬಾಡಗದ ಮಣಿ ಸೇರಿದಂತೆ ವಿವಿಧ ಹಾಡಿಗಳ ಪ್ರಮುಖರು ಇದ್ದರು.